ಲುಕ್ಔಟ್ ನೋಟಿಸ್ ಜಾರಿಯಾಗಿದ್ದ ಆರೋಪಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
Friday, May 5, 2023
ಕಾಸರಗೋಡು: ಸೈಬರ್ ದಾಳಿಯಿಂದ ಮನನೊಂದು ಯುವತಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಕಾಸರಗೋಡಿನ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೊಟ್ಟಾಯಂ ಕೋದನಲ್ಲೂರು ನಿವಾಸಿ ಅರುಣ್ ವಿದ್ಯಾಧರನ್ (32) ಮೃತಪಟ್ಟ ಯುವಕ. ಈತ ಕಾಞಂಗಾಡ್‌ನ ವಸತಿ ಗೃಹವೊಂದರಲ್ಲಿ ಗುರುವಾರ ಮಧ್ಯಾಹ್ನ ಆತ್ಮಹತ್ಯೆಗೈದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋದನಲ್ಲೂರಿನ ಆದಿರಾ ಮುರಳೀಧರನ್ (26) ಎಂಬ ಯುವತಿಯ ಮೇಲೆ ಈತ ನಡೆಸಿದ ಸೈಬರ್ ದಾಳಿಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಬಳಿಕ ಈತ ತಲೆಮರೆಸಿಕೊಂಡಿದ್ದು, ಪೊಲೀಸರು ಈತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಆರೋಪಿ ಕೇರಳ ಬಿಟ್ಟು ಪರಾರಿಯಾಗಿದ್ದಾಗಿ ಮೊಬೈಲ್ ಟವರ್ ಲೊಕೇಶನ್ ನಿಂದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊಯಂಬತ್ತೂರಿಗೂ ತೆರಳಿ ಪೊಲೀಸರು ಶೋಧ ನಡೆಸಿದ್ದರು. ಅಲ್ಲದೆ ಆರೋಪಿಯ ಪತ್ತೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು.
ಅರುಣ್ ವಿದ್ಯಾಧರನ್ ಫೈನಾಪಲ್ ವ್ಯಾಪಾರಿಯಾಗಿದ್ದನು. ಈತ ಮಲಪ್ಪುರಂ ಪೆರಿಂದಲ ಮಣ್ಣದ ರಾಜೇಶ್ ಕುಮಾರ್ ಎಂಬ ನಕಲಿ ವಿಳಾಸ ನೀಡಿ ಮೇ 2ರಂದು ವಸತಿ ಗೃಹದಲ್ಲಿ ಕೊಠಡಿ ಪಡೆದಿದ್ದನು. ಆದರೆ ಕೊಠಡಿಯಲ್ಲಿ ಮತದಾರ ಚೀಟಿ, ಡ್ರೈವಿಂಗ್ ಲೈಸನ್ಸ್ ಪತ್ತೆಯಾಗಿದ್ದು, ಇದರಿಂದ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎ. 30ರಂದು ಕೊಟ್ಟಾಯಂ ಕಡತುರುತ್ತಿ ಕೋದನಲ್ಲೂರಿನ ಆದಿರಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್ ಬುಕ್ ನಲ್ಲಿ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದನು. ಪರಿಣಾಮ ಆದಿರಾ, ಈತನೊಂದಿಗಿನ ಸ್ನೇಹವನ್ನು ತ್ಯಜಿಸಿದ್ದರು. ಆ ಬಳಿಕ ಆದಿರಾಗೆ ಮದುವೆ ಪ್ರಸ್ತಾಪ ಬರುತ್ತಿವೆ ಎಂಬುದನ್ನು ತಿಳಿದುಕೊಂಡಿದ್ದ ಅರುಣ್, ಸಾಮಾಜಿಕ ಜಾಲತಾಣದಲ್ಲಿ ಆದಿರಾಳನ್ನು ನಿಂದಿಸಿ, ಫೇಸ್ಬುಕ್ ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್ ಮಾಡಿ ಮಾನಹಾನಿಕರವಾಗಿ ಬರಹಗಳನ್ನು ಬರೆದಿದ್ದನು. ಇದರ ಬಗ್ಗೆ ಅದಿರಾ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆಕೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.