ಬಸ್ ನಲ್ಲಿ ಮಹಿಳೆಯರಿಬ್ಬರ ನಡುವೆ ಕುಳಿತು ಕಾಮುಕತನ ಪ್ರದರ್ಶನ: ವೀಡಿಯೋ ಹರಿಯಬಿಟ್ಟು ಘಟನೆ ವಿವರಿಸಿದ ನಟಿ
Thursday, May 18, 2023
ಕೊಚ್ಚಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಲಯಾಳಂ ನಟಿ ಹಾಗೂ ಮಾಡೆಲ್‌ಗೆ ಖಾಸಗಿ ಅಂಗವನ್ನು ಪ್ರದರ್ಶಿಸಿದ ಆರೋಪದ ಮೇಲೆ 27 ವರ್ಷದ ಕಾಮುಕ ಯುವಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೋಯಿಕ್ಕೋಡ್‌ನ ಕಯಾಕೋಡಿ ನಿವಾಸಿ ಸವಾದ್ ಬಂಧಿತ ಆರೋಪಿ. ಬಂಧಿತ ಆರೋಪಿಯನ್ನು 14 ದಿನಗಳ ರಿಮ್ಯಾಂಡ್‌ನಲ್ಲಿ ಇರಿಸಲಾಗಿದೆ. ಬಸ್‌ನಿಂದ ಇಳಿದು ತಪ್ಪಿಸಿಕೊಂಡು ಓಡುವಾಗ ಸ್ಥಳೀಯರು ಮತ್ತು ಬಸ್ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ.
ತ್ರಿಶ್ಶೂರು ಮೂಲದ ನಟಿ ನಂದಿತಾ ಶಂಕರ್ ಬಸ್‌ನಲ್ಲಿ ನಡೆದ ಘಟನೆಯನ್ನು ವೀಡಿಯೋ ಮೂಲಕ ವಿವರಿಸಿದ್ದಾರೆ. ಇದುವರೆಗೂ ಆ ವೀಡಿಯೋವನ್ನು 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ನಂದಿತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮಗಾದ ಅದೇ ರೀತಿಯ ಘಟನೆಗಳನ್ನು ಹಂಚಿಕೊಂಡಿದ್ದಾರೆ.
ನಂದಿತಾ ಸಿನಿಮಾ ಶೂಟಿಂಗ್‌ಗಾಗಿ ಮಂಗಳವಾರ ಎರ್ನಾಕುಲಂಗೆ ತೆರಳುತ್ತಿದ್ದರು. ಈ ವೇಳೆ ಅಂಗಮಾಲಿ ಎಂಬಲ್ಲಿ ಆರೋಪಿ ಸವಾದ್ ಬಸ್ ಏರಿದ್ದಾನೆ. ಬಸ್ ನಲ್ಲಿ ಇಬ್ಬರು ಮಹಿಳೆಯರು ನಡುವೆ ಕುಳಿತುಕೊಂಡಿದ್ದಾನೆ. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಕೂಡ ಒಬ್ಬರು. ಬಸ್ ಹೊರಡಲಾರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನೆ.
ತಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಆತ ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್ ಅನತಿ ದೂರ ಸಾಗುತ್ತಿದ್ದಂತೆ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಳಿಕ ಬಸ್‌ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆದರೂ ತನ್ನ ದುಷ್ಕೃತ್ಯ ಮುಂದುವರಿಸಿದ್ದಾನೆ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್ ಜಿಪ್ ತೆರೆದು ಹಸ್ತಮೈಥುನ ಮಾಡತೊಡಗಿದ. ಈ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ.
ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ತಕ್ಷಣ ತನ್ನ ಪ್ಯಾಂಟ್ ಜಿಪ್ ಹಾಕಿಕೊಂಡಿದ್ದಾನೆ. ನಾನು ಧ್ವನಿ ಏರಿಸುತ್ತಿದ್ದಂತೆ ಬಸ್ ಸಿಬ್ಬಂದಿ ಬಳಿಗೆ ಬಂದಿದ್ದಾರೆ. ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದೆ. ದೂರು ನೀಡುತ್ತೀರಾ ಎಂದು ಬಸ್ ಕಂಡಕ್ಟರ್ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್ ಜಿಪ್ ಓಪನ್ ಆಗಿಲ್ಲ ಎಂದು ವಾದಿಸಿದ್ದಾನೆ. ಬಸ್ ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಮತ್ತು ಬಸ್‌ನ ಬಾಗಿಲು ತೆರೆಯುತ್ತಿದ್ದಂತೆ ಆತ ಓಡಲಾರಂಭಿಸಿದ್ದಾನೆ. ಬಳಿಕ ಕಂಡಕ್ಟರ್ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ ಚೇಸ್ ಮಾಡಿ ಹಿಡಿದಿದ್ದಾರೆ ನಂದಿತಾ ಶಂಕರ ನಡೆದ ಘಟನೆಯನ್ನು ವೀಡಿಯೋ ಮೂಲಕ ವಿವರಿಸಿದ್ದಾರೆ.