ಆನ್ ಲೈನ್ ನಲ್ಲಿ ಅಶ್ಲೀಲ ವೀಡಿಯೋ ಅಪ್ಲೋಡ್ : ತಮಿಳು ನಟಿಯ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಿಯಕರ
Friday, May 19, 2023
ಚೆನ್ನೈ: ಬಂಧನವಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಐಟಿ ಉದ್ಯೋಗಿ, ಇದೀಗ ತನಗೆ ಬೆದರಿಕೆಯೊಡ್ಡುತ್ತಿದ್ದಾನೆಂದು ಆರೋಪಿಸಿ ತಮಿಳು ನಟಿ ಲುಬ್ನಾ ಆಮೀರ್ ಇತ್ತಿಚೆಗಷ್ಟೇ ಪೊಲೀಸ್ ದೂರು ದಾಖಲಿಸಿದ್ದರು. ಇದೀಗ ಆಕೆಯ ವಿರುದ್ಧವೇ ಐಟಿ ಉದ್ಯೋಗಿ ಗಂಭೀರ ಆರೋಪ ಮಾಡಿ ಸರಣಿ ದೂರುಗಳನ್ನು ದಾಖಲಿಸಿದ್ದಾನೆ.
ಲುಬ್ನಾ ಆಮೀರ್ ತಮಿಳಿನ ಕೆಕ್ಕರಾನ್ ಮೀಕ್ಕರಾನ್ ಸಿನಿಮಾದಲ್ಲಿ ತನ್ನ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ, ಅನೇಕ ವೆಬ್ ಸರಣಿಗಳಲ್ಲೂ ಈ ನಟಿಸಿದ್ದರು. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ನಲ್ಲಿ ಲುಬ್ನಾಗೆ ಚೆನ್ನೈನ ವ್ಯಾಸರ್ಪದಿ ಮೂಲದ ಐಟಿ ಉದ್ಯೋಗಿ ಮಸಿಉಲ್ಲ ಖಾನ್ ಎಂಬಾತನ ಪರಿಚಯವಾಗಿದೆ.
ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಡೇಟಿಂಗ್ ಆರಂಭಿಸಿದ್ದಾರೆ. ಮಸಿಉಲ್ಲಗೆ ಈಗಾಗಲೇ ಮದುವೆ ಆಗಿರುವ ಸಂಗತಿ ಲುಬ್ನಾಗೆ ತಿಳಿಯುತ್ತಲೇ ಆಕೆ ಸಂಬಂಧಕ್ಕೆ ಕೊನೆ ಹಾಡಿದ್ದಳು. ಇದಾದ ಬಳಿಕ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಲುಬ್ನಾ, ತಾವಿಬ್ಬರೂ ಜತೆಗಿದ್ದ ಸಮಯದಲ್ಲಿ ಸೆರೆಹಿಡಿದಿರುವ ಇಂಟಿಮೇಟ್ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾನೆಂದು ಮುಸಿಉಲ್ಲಾ ಖಾನ್ ವಿರುದ್ಧ ತಿರುವಲ್ಲಿಕ್ಕೇನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ದೂರಿನನ್ವಯ ಆತನ ಬಂಧನವಾಗಿತ್ತು. ಇದಾದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದೀಗ ಲುಬ್ನಾ, ದೂರನ್ನು ಹಿಂಪಡೆಯುವಂತೆ ಮಸಿಉಲ್ಲನ ಪತ್ನಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಚೆನ್ನೈ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾಳೆ. ಇನ್ನೊಂದೆಡೆ ಮುಸಿಉಲ್ಲ ಕೂಡ ಪೆರವಳ್ಳೂರು, ವೆಲ್ಲೂರು ಮತ್ತು ವಿನಿಯಂಪಾಡಿ ಪೊಲೀಸ್ ಠಾಣೆಗಳಲ್ಲಿ ಲುಬ್ಬಾ ವಿರುದ್ಧ ಸರಣಿ ದೂರುಗಳನ್ನು ದಾಖಲಿಸಿದ್ದಾನೆ. ಮಸಿಉಲ್ಲನ ಪ್ರಕಾರ 2020ರಲ್ಲಿ ಆತ ತನ್ನ ಮೊದಲ ಪತ್ನಿಯಿಂದ ದೂರವಾಗಿದ್ದಾನೆ. ಇಬ್ಬರ ನಡುವೆ ಡಿವೋರ್ಸ್ ಪ್ರಕರಣ ನಡೆಯುತ್ತಿದೆ. ಇದರ ನಡುವೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಲುಬ್ನಾಳ ಪರಿಚಯವಾಗಿದೆ. ಆಕೆಯನ್ನು ಮದುವೆಯಾಗಲೂ ಉದ್ದೇಶಿಸಿದ್ದೆ.
ಆದರೆ ಆಕೆ ಭಾರತದಲ್ಲಿ ನಿಷೇಧಗೊಂಡಿರುವ ಆನ್‌ಲೈನ್ ವೇದಿಕೆಗಳಲ್ಲಿ ತನ್ನ ಅಶ್ಲೀಲ ವೀಡಿಯೋಗಳನ್ನು ಪೋಸ್ಟ್ ಮಾಡಿ ಹಣ ಸಂಪಾದಿಸುತ್ತಿರುವುದು ಗೊತ್ತಾಯಿತು. ಇದರಿಂದ ನಾನು ಆಕೆಯಿಂದ ಪ್ರತ್ಯೇಕವಾದೆ. ಇಬ್ಬರು ಸಂಬಂಧದಲ್ಲಿದ್ದ ಸಮಯದಲ್ಲಿ ನನ್ನ ಸಾಕಷ್ಟು ಹಣವನ್ನು ಆಕೆ ವ್ಯಯಿಸಿದ್ದಾಳೆ ಎಂದು ಮಸಿಉಲ್ಲ ಆರೋಪ ಮಾಡಿದ್ದಾನೆ. ಎರಡು ಕಡೆಯ ಆರೋಪ - ಪ್ರತ್ಯಾರೋಪಗಳನ್ನು ಕೇಳಿ ಇಬ್ಬರ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸತ್ಯಾಸತ್ಯತೆ ಏನೆಂದು ತಿಳಿಯಲು ತನಿಖೆ ಆರಂಭಿಸಿದ್ದಾರೆ.