ಸಹೋದ್ಯೋಗಿ ಯುವತಿಯರ ಸ್ನಾನ ಮಾಡುವ ವೀಡಿಯೋ ಚಿತ್ರೀಕರಣ: ಕುಂದಾಪುರ ಮೂಲದ ವ್ಯಕ್ತಿ ಅರೆಸ್ಟ್
Friday, May 26, 2023
ಬೆಂಗಳೂರು: ಸಹೋದ್ಯೋಗಿ ಯುವತಿಯರು ಸ್ನಾನ ಮಾಡುತ್ತಿರುವ ಸಂದರ್ಭದ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕುಂದಾಪುರ ಮೂಲದ ಆರೋಪಿಯನ್ನು ಎಚ್‌ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 22 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕುಂದಾಪುರ ಮೂಲದ ರಘುರಾಮ್ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ರಘುರಾಮ್ ನಿಸರ್ಗ ಗಾರ್ಡನ್‌ನಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದನು. ಈತ ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಸಂತ್ರಸ್ತೆ ಕ್ಯಾಟರಿಂಗ್ ನ ಕ್ಯಾಷಿಯರ್ ಆಗಿದ್ದರೆ, ಆಕೆಯ ಸ್ನೇಹಿತೆ ಕೌಂಟರ್ ಮ್ಯಾನೇಜರ್ ಆಗಿದ್ದರು. ಸಂತ್ರಸ್ತೆ, ಆಕೆಯ ಸ್ನೇಹಿತೆ ಹಾಗೂ ಆರೋಪಿ ರಘುರಾಮ್ ನಿಸರ್ಗ ಗಾರ್ಡನ್‌ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೇ 12ರಂದು ಸಂತ್ರಸ್ತೆ ಸ್ನಾನ ಮಾಡಲು ಬಾತ್ ರೂಮಿಗೆ ಹೋಗಿದ್ದರು. ಆಗ ಆರೋಪಿಯು ಬಾತ್ ರೂಮಿನ ಗೋಡೆಯ ಮೇಲಿನಿಂದ ಆಕೆ ಸ್ನಾನ ಮಾಡುವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ. ಅದನ್ನು ಗಮನಿಸಿದ ಆಕೆಯ ಸ್ನೇಹಿತೆ ಜೋರಾಗಿ ಕೂಗಿಕೊಂಡಿದ್ದಾಳೆ. ನಂತರ ಆರೋಪಿಯ ಮೊಬೈಲ್ ಕಸಿದುಕೊಂಡಾಗ ಇಬ್ಬರು ಯುವತಿಯರು ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಸೆರೆಹಿಡಿದು ಸಂಗ್ರಹಿಸಿಕೊಂಡಿರುವುದು ಪತ್ತೆಯಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ, ‘ತಾನು ಹೇಳಿದಂತೆ ಕೇಳಬೇಕು, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲವಾದಲ್ಲಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ’ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದರು.