ಮಂಗಳೂರು: ಐಕಳ ಹರೀಶ್ ಶೆಟ್ಟಿವರ ಮನೆದರೋಡೆ ಪ್ರಕರಣದ ಇಬ್ಬರು ಕಳ್ಳರು ಅರೆಸ್ಟ್ - 1ಕೆಜಿ ಚಿನ್ನಾಭರಣ ವಶಕ್ಕೆ
Thursday, June 15, 2023
ಮಂಗಳೂರು: ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಮನೆದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸ್ ತಂಡ ಇಬ್ಬರು ದರೋಡೆಕೋರರನ್ನು ಬಂಧಿಸಿ 1 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಳ ತಾಲೂಕಿನ ಬಜಗೋಳಿ ಮೂಲದ ಗಣೇಶ ನಾಯ್ಕ್(26), ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಳೇ ಸಿದ್ದಾಪುರ ಗುಯ್ಯಾ ಗ್ರಾಮ ನಿವಾಸಿ ರಂಜಿತ್ ಕೆ.ಆರ್(26) ಬಂಧಿತ ಆರೋಪಿಗಳು.
ಆರೋಪಿಗಳು 2023ರ ಜ.15ರ ರಾತ್ರಿ 8-30ಯಿಂದ 16ರ ಬೆಳಗ್ಗೆ 9ಗಂಟೆಯ ನಡುವೆ ಮನೆಯ ಲಾಕ್ ಮುರಿದು ಚಿನ್ನ, ಬೆಳ್ಳಿಯ ಆಭರಣಗಳು ಹಾಗೂ ನಗದು ದರೋಡೆ ಮಾಡಿದ್ದರು. ಈ ವೇಳೆ ಒಟ್ಟು 10 ಲಕ್ಷ ರೂ.ವರೆಗಿನ ಚಿನ್ನಾಭರಣ-ನಗದು ದರೋಡೆ ನಡೆದಿತ್ತೆಂದು ದೂರಲಾಗಿತ್ತು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು.
ಸಿಸಿ ಕ್ಯಾಮರಾ ಸಹಿತ ಯಾವುದೇ ಸುಳಿವು ಇಲ್ಲದ ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಪೊಲೀಸರು ಇದೀಗ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳು ಸಹಿತ, ಒಂದು ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳಿಂದ 2 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 56,50,000 ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣ ಬೇಧಿಸಿದ ಸಿಸಿಬಿ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ 10,000 ರೂ. ಬಹುಮಾನ ಘೋಷಿಸಿದ್ದಾರೆ.
ಆರೋಪಿಗಳ ಪೈಕಿ ಗಣೇಶ್ ನಾಯ್ಕ್ ಹಾಗೂ ಇತರ ಇಬ್ಬರು ಆರೋಪಿಗಳು ಈ ಹಿಂದೆ ಮಂಗಳೂರಿನ ಕೆಳರಾಯಿ ಚರ್ಚ್ ರಸ್ತೆಯ ಮನೆಯೊಂದರ ಬಾಗಿಲಿನ ಬೀಗವನ್ನು ಒಡೆದು ಬೆಲೆಬಾಳುವ ಸೊತ್ತುಗಳನ್ನು ಹಾಗೂ ಮಾರುತಿ ಬ್ರೀಝಾ ಕಾರನ್ನು ಕಳವುಗೈದ ಪ್ರಕರಣದಲ್ಲಿ ಭಾಗಿಯಾಗಿದ್ದರು ಈ ಪ್ರಕರಣವು ಪತ್ತೆಯಾಗಿದೆ. ಅಲ್ಲದೆ ಗಣೇಶ್ ನಾಯ್ಕ್ ಎಂಬಾತನ ವಿರುದ್ಧ ಈ ಹಿಂದೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿರುತ್ತದೆ.