-->
ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿಗೆ 10 ಷರತ್ತುಗಳು‌

ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿಗೆ 10 ಷರತ್ತುಗಳು‌


ಬೆಂಗಳೂರು: ಕಾಂಗ್ರೆಸ್‌ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ 200 ಯುನಿಟ್‌ ಫ್ರಿ ಕರೆಂಟ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಜುಲೈ ತಿಂಗಳಿಂದ ಜಾರಿಗೊಳಿಸಲಾಗುತ್ತಿದ್ದು, ಅದಕ್ಕೆ 10 ಮಾನದಂಡಗಳನ್ನು ನೀಡಿದೆ. ಈ ಷರತ್ತುಗಳನ್ನು ಪೂರೈಸಿದವರಿಗೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ಲಭ್ಯವಾಗಲಿದೆ.

ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿಮನೆಗೂ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯನ್ನು ನೀಡಲಾಗುತ್ತದೆ. ಪ್ರತಿ ಗ್ರಾಹಕರ ತಿಂಗಳಿನ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರ) ಅನ್ವಯ ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕೆ ಅನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.


ಉಚಿತ ವಿದ್ಯುತ್‌ ಪಡೆಯಲು ಬೇಕಾದ ಷರತ್ತುಗಳು ಈ ರೀತಿ ಇದೆ: 

1. ಗೃಹಜ್ಯೋತಿ ಯೋಜನೆ ಗೃಹ ಬಳಕೆಯ ವಿದ್ಯುತ್‌ ಸಂಪರ್ಕಗಳಿಗೆ ಮಾತ್ರ ಅನ್ವಯವಾಗಲಿದೆ. ವಾಣಿಜ್ಯ ಉದ್ದೇಶಗಳ ವಿದ್ಯುತ್ ಸಂಪರ್ಕಕ್ಕೆ ಅನ್ವಯವಾಗುವುದಿಲ್ಲ. 
2. ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಲಾಗುತ್ತದೆ.
3. ಗೃಹ ವಿದ್ಯುತ್‌ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ಅಂತಿಮ ಬಿಲ್ ನಲ್ಲಿ ನೀಡಲಾಗುತ್ತದೆ. ಗ್ರಾಹಕರು ನೆಟ್ ಬಿಲ್ ಅನ್ನು ಪಾವತಿಸುವುದು. 
4. ಅರ್ಹ ಯುನಿಟ್ ಹಾಗೂ ಮೊತ್ತಕ್ಕಿಂತ ಒಳಗೆ ವಿದ್ಯುತ್ ಬಿಲ್ ಬಂದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗುವುದು.
5. ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಚಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
6. ಪ್ರತಿ ಫಲಾನುಭವಿಯು ತನ್ನ Customer ID / Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಿಸುವುದು.
7. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸುವುದು.
8. ದಿನಾಂಕ 30.06.2023ರ ಅಂತ್ಯಕ್ಕೆ (ಜೂನ್ 2023ರ ಮಾಹೆಯಲ್ಲಿ ಬಳಸಿದ ವಿದ್ಯುತ್‌ ಪ್ರಮಾಣಕ್ಕೆ ಜುಲೈ 2023ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು, ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್‌ ಸ್ಥಾವರಗಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು. 
9. ಗೃಹ ವಿದ್ಯುತ್‌ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
10. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.


 


Ads on article

Advertise in articles 1

advertising articles 2

Advertise under the article