ಒಡಿಶಾ ರೈಲು ದುರಂತ ಪ್ರಕರಣ: ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆ 900ಕ್ಕೂ ಅಧಿಕ ಮಂದಿಗೆ ಗಾಯ
Saturday, June 3, 2023
ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ಪೇಸೆಂಜರ್ ರೈಲು ಹಾಗೂ ಗೂಡ್ಸ್ ರೈಲಿನ ನಡುವೆ ಶುಕ್ರವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿತ್ತು. ಇಂದು ಬೆಳಗ್ಗೆ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಒಡಿಶಾದ ಬಾಲಸೋರ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಬಳಿಕ 3 ಸೀಪರ್ ಕೋಚ್‌ಗಳನ್ನು ಬಿಟ್ಟು 10-12 ಬೋಗಿಗಳು ಹಳಿತಪ್ಪಿದೆ.
ಬೋಗಿಗಳಲ್ಲಿರುವ ಪ್ರಯಾಣಿಕರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ನಡೆಸಲಾಗಿದೆ. ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಎರಡೂ ರೈಲುಗಳು ಒಂದೇ ಮಾರ್ಗದಲ್ಲಿ ಬಂದಿದ್ದರಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಿಗ್ನಲ್ ವೈಫಲ್ಯದಿಂದ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಜನರು ಜಮಾಯಿಸಿದ್ದಾರೆ.
ಈ ರೈಲು ಚೆನ್ನೈ ಸೆಂಟ್ರಲ್‌ನಿಂದ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣಕ್ಕೆ ಸಂಚರಿಸುತ್ತಿತ್ತು. ರೈಲು ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಟು ಚೆನ್ನೈನ ಪುರಟ್ಟಿ ತಲೈವ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುತ್ತಿತ್ತು. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.