ಮೊಮ್ಮಗನ ಮೃತದೇಹದೊಂದಿಗೆ 10ದಿನಗಳನ್ನು ಕಳೆದ ಅಜ್ಜಿ
Tuesday, June 27, 2023
ಬಾರಾಬಂಕಿ: ಮಾನಸಿಕವಾಗಿ ಅಸ್ವಸ್ಥಗೊಂಡ ವೃದ್ಧೆಯೊಬ್ಬಳು 10 ದಿನಗಳಿಂದ ತನ್ನ ಮೊಮ್ಮಗನ ಮೃತದೇಹದೊಂದಿಗೆ ವಾಸಿಸುತ್ತಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ವೃದ್ಧೆಯ ಮೊಮ್ಮಗ ಪ್ರಿಯಾಂಶು (17) ತಂದೆ- ತಾಯಿಯನ್ನು ಕಳೆದುಕೊಂಡಿದ್ದು, ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ. ಕಳೆದ ಎರಡು ದಿನಗಳಿಂದ ವೃದ್ಧೆಯ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅಕ್ಕಪಕ್ಕದವರು ಇದನ್ನು ಗಮನಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ವೃದ್ಧೆಯ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಾಲಕನ ಕೊಳೆತ ಮೃತದೇಹ ಪತ್ತೆಯಾಗಿದೆ. ತಕ್ಷಣ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವೃದ್ಧೆಯ ಪತಿ ಸರ್ಕಾರಿ ನೌಕರನಾಗಿದ್ದು, ಕೆಲ ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದರು. ಅದರಿಂದ ಬರುವ ಪಿಂಚಣಿಯಿಂದಲೇ ಆಕೆ ಹಾಗೂ ಮೊಮ್ಮಗ ಜೀವನ ನಡೆಸುತ್ತಿದ್ದರು. ವೃದ್ಧೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಪುತ್ರಿ ಮತ್ತು ಆಕೆಯ ಪತಿ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅವರ ಪುತ್ರನೇ ಪ್ರಿಯಾಂಶು. ಈತ ಕಳೆದ ಕೆಲವು ವರ್ಷಗಳಿಂದ ಅಜ್ಜಿಯೊಂದಿಗೆ ವಾಸಿಸುತ್ತಿದ್ದ. . ಇನ್ನು, ಕಿರಿಯ ಮಗಳು ಲಖೀಂಪುರ ಖೇರಿಯಲ್ಲಿ ವಾಸಿಸುತ್ತಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಪೊಲೀಸರು, ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಆಕೆ ಪ್ರತಿದಿನ ತನ್ನ ಮೊಮ್ಮಗನ ಮೃತದೇಹವನ್ನು ತೊಳೆದು ಅವನ ಮೃತದೇಹದ ಬಟ್ಟೆಗಳನ್ನು ಬದಲಾಯಿಸುತ್ತಿದ್ದಳು. ಆತನ ಸಾವಿನ ಬಗ್ಗೆ ಕೇಳಿದಾಗ, ಹತ್ತು ದಿನಗಳ ಹಿಂದೆ ಪ್ರಿಯಾಂಶು ನಿಧನವಾದ ಎಂದು ವೃದ್ಧೆ ಹೇಳಿದ್ದಾಳೆ ಎಂದು ತಿಳಿಸಿದರು.