-->
ಜೂ.11ರಿಂದ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಆದ್ರೂ ಟಿಕೆಟ್ ಪಡೆಯಲೇಬೇಕು

ಜೂ.11ರಿಂದ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಆದ್ರೂ ಟಿಕೆಟ್ ಪಡೆಯಲೇಬೇಕು


ಬೆಂಗಳೂರು: ರಾಜ್ಯದ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ 'ಶಕ್ತಿ' ಯೋಜನೆ ಜೂ.11ರಿಂದ ಜಾರಿಯಾಗಲಿದೆ‌. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಪ್ರಯಾಣದ ವೇಳೆ ನೀಡುವ ಮಾದರಿ ಟಿಕೆಟ್ ಬಗ್ಗೆ ಸಿದ್ಧತೆಗಳು ಆರಂಭವಾಗಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಎಲ್ಲಿಂದ ಎಲ್ಲಿವರೆಗೆ ಪ್ರಯಾಣ ಮಾಡಲಿದ್ದಾರೆ ಎಂಬುದರ ಟಿಕೆಟ್ ನೀಡಲಾಗುತ್ತದೆ. ಆದರೆ, 'ಮಹಿಳಾ ಪ್ರಯಾಣಿಕರ ಉಚಿತ ಚೀಟಿ- ಶಕ್ತಿ ಯೋಜನೆ' ಎಂದು ಟಿಕೆಟ್ ನಲ್ಲಿ ನಮೂದಿಸಲಾಗುತ್ತದೆ. ಇದರಿಂದ ಮಹಿಳಾ ಪ್ರಯಾಣಿಕರು ಯಾವುದೇ ಶುಲ್ಕ ಭರಿಸಬೇಕಾಗಿಲ್ಲ.

ಬಿಎಂಟಿಸಿ ಶಾಂತಿನಗರ ಟಿಟಿಎಂಸಿ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ಸು ನಿಲ್ದಾಣದವರೆಗೆ ಪ್ರಯಾಣ ಮಾಡುವ ಮಹಿಳೆಗೆ ನೀಡುವ ಮಾದರಿ ಟಿಕೆಟನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಟಿಕೆಟ್ ಮಾದರಿ ಇನ್ನೂ ಅಂತಿಮವಾಗಿಲ್ಲ. ಟಿಕೆಟ್‌ನಲ್ಲಿ ಯಾವ ಮಾಹಿತಿ ನಮೂದಿಸಬೇಕು ಎಂಬ ಬಗ್ಗೆ 3-4 ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಂತಿಮವಾಗಿ ಸೂಕ್ತವಾದದ್ದನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಉಚಿತ ಪ್ರಯಾಣವಾದರೂ ಮಹಿಳೆಯರಿಗೆ ಟಿಕೆಟ್ ನೀಡುವುದರಿಂದ ಎಷ್ಟುಮಂದಿ ಪ್ರಯಾಣ ಮಾಡಿದ್ದಾರೆ. ಎಷ್ಟು ಕಿ.ಮೀ. ಪ್ರಯಾಣ ಮಾಡಿದ್ದಾರೆ ಎಂಬ ಲೆಕ್ಕಗಳು ನಿಗಮಕ್ಕೆ ಮಾಹಿತಿ ದೊರಕುತ್ತದೆ. ಸರ್ಕಾರ ಹಾಗೂ ನಿಗಮಗಳ ನಡುವಿನ ಆರ್ಥಿಕ ಹೊಂದಾಣಿಕೆಗಳಿಗೆ ಇವು ಪೂರಕವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಸರ್ಕಾರದ ಎಲ್ಲಾ ಸಾರಿಗೆ ನಿಗಮಗಳ ಸಾಮಾನ್ಯ, ತಡೆ ರಹಿತ ಹಾಗೂ ವೇಗದೂತ ಬಸ್ ಗಳಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ನೌಕರರು, ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರಿಗೂ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಈ ಸೌಲಭ್ಯ ಹೊರ ರಾಜ್ಯದ ಮಹಿಳೆಯರು ಪಡೆಯುವಂತಿಲ್ಲ. ಹೀಗಾಗಿ ಸೂಕ್ತ ಪಾಸು ವ್ಯವಸ್ಥೆ ಮಾಡಿ, ಪಾಸು ತೋರಿಸಿದವರಿಗೆ ಹಣ ಪಡೆಯದೆ ಟಿಕೆಟ್ ನೀಡುವ ವ್ಯವಸ್ಥೆ ಜಾರಿ ಮಾಡಲು ಸಾರಿಗೆ ನಿಗಮಗಳು ಲೆಕ್ಕಾಚಾರ ಹಾಕುತ್ತಿವೆ. ಆದರೆ, ಯಾವೊಂದೂ ಅಂತಿಮಗೊಂಡಿಲ್ಲ. ಅಂತಿಮವಾದ ಬಳಿಕ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Ads on article

Advertise in articles 1

advertising articles 2

Advertise under the article