ಗಮನ ಬೇರೆಡೆ ಸೆಳೆದು ಹಣ ದರೋಡೆಗೈಯುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್ : 13 ಲಕ್ಷ ರೂ. ವಶಕ್ಕೆ
Thursday, June 15, 2023
ಬೆಂಗಳೂರು: ಗಮನ ಬೇರೆಡೆ ಸೆಳೆದು ವಾಹನಗಳಲ್ಲಿದ್ದ ನಗದು ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ರಾಜರಾಜೇಶ್ವರಿನಗರ ಠಾಣಾ ಪೊಲೀಸರು ಬಂಧಿಸಿ 13.97 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಕಾರು, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಚೆನ್ನೈ ಮೂಲದ ಕಾರ್ತಿಕ್ (31), ಅನುಮೋದಾಸ್(44) ಬಂಧಿತ ಆರೋಪಿಗಳು.
ಜೂನ್ 2ರಂದು ಚೇತನ್ ಎಂಬವರು ತಮ್ಮ ಟೊಯೋಟಾ ಇನ್ನೋವಾ ಕಾರಿನಲ್ಲಿ ಇಟ್ಟಿದ್ದ 15 ಲಕ್ಷ ರೂ. ನಗದು ಕಳವುಗೈಯಲಾಗಿತ್ತು. ಈ ಬಗ್ಗೆ ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ 13.97 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಉಪಯೊಗಿಸುತ್ತಿದ್ದ ಎರಿಟಿಗಾ ಕಾರು, ಒಂದು ಅಪಾಚಿ ಹಾಗೂ ಒಂದು ಹೊಂಡಾ ಹಾರ್ನೆಟ್ ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆಯೂ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದ ಭಾಗಿಯಾಗಿದ್ದ ಉಳಿದ ಅರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.