ವೀರ್ಯ ಬೇರೆಯಾಗಿ ಜೈವಿಕ ತಂದೆ ಅದಲು - ಬದಲು: 1.50 ಕೋಟಿ ರೂ. ದಂಡ
Tuesday, June 27, 2023
ನವದೆಹಲಿ: ಸಹಾಯಕ ಸಂತಾನೋತ್ಪತ್ತಿ ತಂತ್ರ (ಎಆರ್‌ಟಿ)ದಲ್ಲಿ ವೀರ್ಯ ಅದಲು-ಬದಲು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಡಿಆರ್‌ಸಿ) ದೆಹಲಿಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ 1.50 ಕೋಟಿ ರೂ. ದಂಡ ವಿಧಿಸಿ ಆದೇಶಿಸಿದೆ.
ಜೂನ್ 2009ರಲ್ಲಿ ಎಆರ್‌ಟಿ ಪಕ್ರಿಯೆಯ ಮೂಲಕ ಯುವತಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಆ ಶಿಶುಗಳ ರಕ್ತದ ಗುಂಪು ಪಾಲಕರ ಗುಂಪಿನೊಂದಿಗೆ ಹೊಂದಾಣಿಕೆಯಾಗಿಲ್ಲ. ಆದ್ದರಿಂದ, ಪಿತೃತ್ವ ಪರೀಕ್ಷೆ ಅಥವಾ ಡಿಎನ್ಎ ಪ್ರೊಫೈಲ್ ತಪಾಸಣೆ ನಡೆಸಲಾಗಿದೆ. ಆಗ, ಮಹಿಳೆಯ ಪತಿ ಈ ಅವಳಿ ಮಕ್ಕಳ ಜೈವಿಕ ತಂದೆಯಲ್ಲ ಎಂಬುದು ಬಹಿರಂಗವಾಗಿದೆ. ಈ ಹಿನ್ನೆಲೆ ದಂಪತಿ ಆಸ್ಪತ್ರೆ ಹಾಗೂ ವೈದ್ಯರ ಮೇಲೆ ನಿರ್ಲಕ್ಷ್ಯ ಆರೋಪ ಹೊರಿಸಿ 2 ಕೋಟಿ ರೂ. ಪರಿಹಾರ ನೀಡಬೇಕೆಂದು ದೂರು ದಾಖಲಿಸಿದ್ದರು.
ಈ ದೂರು ಆಲಿಸಿದ ಆಯೋಗವು ಇತ್ತೀಚಿನ ವರ್ಷಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಮತ್ತು ಅನೈತಿಕ ಅಭ್ಯಾಸಗಳನ್ನು ಅನುಸರಿಸುತ್ತಿರುವ ಎಆರ್‌ಟಿ ಚಿಕಿತ್ಸಾಲಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನವಜಾತ ಶಿಶುಗಳ ಡಿಎನ್ಎ ವಿವರ ನೀಡುವುದನ್ನು ಕಡ್ಡಾಯಗೊಳಿಸುವುದರ ಜತೆಗೆ, ಇಂತಹ ಚಿಕಿತ್ಸಾಲಯಗಳ ಮಾನ್ಯತೆ ನೀಡುವ ಅವಶ್ಯಕತೆಯಿದೆ ಎಂದು ಹೇಳಿ, ದಂಪತಿಗೆ ಒಂದುವರೆ ಕೋಟಿ ರೂ. ಪರಿಹಾರ ನೀಡಬೇಕೆಂದು ಆಸ್ಪತ್ರೆಗೆ ವೈದ್ಯರಿಗೆ ದಂಡ ವಿಧಿಸಿದೆ.