
ಪಾಸ್ ಆಗಲು ಎಚ್ಒಡಿಗೆ 18ವರ್ಷದ ಸುಂದರ ಹುಡುಗಿಯರ ಪೂರೈಕೆ: ವೈದ್ಯಕೀಯ ಶಿಕ್ಷಣ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಗಾಯಕಿಯ ರೀಟ್ವಿಟ್
Saturday, June 24, 2023
ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ ತಮ್ಮ ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆಯ ಬಗ್ಗೆ ಕಿಡಿಕಾರಿದ್ದಾರೆ. ಸ್ತ್ರೀವಾದಿ ಎಂದೇ ಖ್ಯಾತರಾಗಿರುವ ಚಿನ್ಮಯಿ ಶ್ರೀಪಾದ ಇದೀಗ ಮಾಡಿರುವ ರಿಟ್ವೀಟ್ ಒಂದು ವೈದ್ಯಕೀಯ ಶಿಕ್ಷಣ ವಲಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ.
ಆರ್ಥೋಪೆಡಿಶಿಯನ್ ಡಾ. ಜಾಸನ್ ಫಿಲಿಪ್ ಮಾಡಿರುವ ಟ್ವಿಟ್ ಅನ್ನು ಚಿನ್ಮಯಿ ಶ್ರೀಪಾದ ಅವರು ರೀಟ್ವಿಟ್ ಮಾಡಿದ್ದಾರೆ. ಡಾ. ಜಾಸನ್ ಫಿಲಿಪ್ ಟ್ವಿಟ್‌ನಲ್ಲಿ ತಿಳಿಸಿರುವ ವಿಚಾರ ಬಹಳ ಗಂಭೀರವಾಗಿದ್ದು, ವೈದ್ಯಕೀಯ ಶಿಕ್ಷಣದ ಕರಾಳತೆಯನ್ನು ಬಿಚ್ಚಿಟ್ಟಿದೆ. ಡಾ. ಜಾಸನ್ ಫಿಲಿಪ್ ವಿದ್ಯಾರ್ಥಿಯಾಗಿದ್ದ ಸಂದರ್ಭ ನಡೆದ ಘಟನೆ ಇದಾಗಿದೆ. ಅಂದು ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಅಥವಾ ಎಚ್‌ಒಡಿಯ ದುರ್ವರ್ತನೆಗೆ ಸಂಬಂಧಿಸಿದ ಟ್ವಿಟ್ ಇದಾಗಿದೆ.
ಆರ್ಥೋಪೆಡಿಶಿಯನ್ ಟ್ವಿಟ್ ಪ್ರಕಾರ, ಅವರು ಅಂತಿಮ ವರ್ಷದ ಆರ್ಥೋಪೆಡಿಕ್ ಓದುತ್ತಿದ್ದ ವೇಳೆ ಎಚ್‌ಒಡಿ, ಪ್ರತಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಯುವತಿಯರನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದರಂತೆ. ಇಬ್ಬರು ಸುಂದರ ಮತ್ತು ಎತ್ತರವಾದ 18 ವರ್ಷದ ಹುಡುಗಿಯರನ್ನು ಒಂದು ರಾತ್ರಿಗೆ ಪೂರೈಸುವಂತೆ ಬೇಡಿಕೆ ಇಡುತ್ತಿದ್ದರು. ಪರೀಕ್ಷೆಯಲ್ಲಿ ಪಾಸ್ ಮಾಡಬೇಕಾದರೆ ಹುಡುಗಿಯರನ್ನು ಪೂರೈಸಿ ಎಂದು ಕೇಳುತ್ತಿದ್ದರು ಎಂದಿದ್ದಾರೆ. ಅಲ್ಲದೆ, ನನ್ನ ಮಾತಿನಲ್ಲಿ ಯಾವುದೇ ಉತ್ತೇಕ್ಷೆ ಇಲ್ಲ ಎಂದಿರುವ ಆರ್ಥೋಪೆಡಿಶಿಯನ್, ಎಚ್‌ಒಡಿ ಬಹಳ ಪ್ರಭಾವೀ ವ್ಯಕ್ತಿಯಾಗಿದ್ದು, ತಮಿಳುನಾಡಿನಾದ್ಯಂತ ತಮ್ಮ ಪ್ರಭಾವ ಹೊಂದಿದ್ದಾರೆ ಎಂದು ಟ್ವಿಟ್ ನಲ್ಲಿ ತಿಳಿಸಿದ್ದಾರೆ.
ತಮಿಳುನಾಡಿನ ರಾಜಕೀಯದಲ್ಲಿ ಎಚ್‌ಒಡಿ ತಮ್ಮ ಪ್ರಭಾವವನ್ನು ಹೊಂದಿದ್ದರು. ಒಂದು ವೇಳೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮದ ಮೊರೆ ಹೋದರೂ ಕಾನೂನಿನ ಮೊರೆ ಹೋದವರಿಗೇ ತಿರುಮಂತ್ರವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಆರ್ಥೋಪೆಡಿಶಿಯನ್ ತಮ್ಮ ಟ್ವಿಟ್‌ನಲ್ಲಿ ಎಚ್ಚರಿಸಿದ್ದಾರೆ.
ಆರ್ಥೋಪೆಡಿಶಿಯನ್ ಡಾ. ಜಾಸನ್ ಫಿಲಿಪ್ ಟ್ವೀಟ್ ಬೆನ್ನಲ್ಲೇ ಡಾ. ದೇವಾಶಿಶ್ ಪಾಲ್ಕರ್ ಎಂಬುವರು ಕೂಡ ಒಂದು ಘಟನೆಯನ್ನು ತಿಳಿಸಿದ್ದಾರೆ. ಇತ್ತಿಚೆಗಷ್ಟೇ ಅವರು ಓರ್ವ ಮೆಡಿಕಲ್ ವಿದ್ಯಾರ್ಥಿಯನ್ನು ಮಾತನಾಡಿಸಿದಾಗ, ಮೊದಲ ಪ್ರಯತ್ನದಲ್ಲೇ ಪಾಸ್ ಆಗಲು ಎಚ್ಒಡಿಗೆ ಚಿನ್ನದ ಸರ ನೀಡಿದ್ದೆ ಎಂದು ತಿಳಿಸಿದ್ದನು ಎಂದಿದ್ದಾರೆ.
ಮೇಲಿನ ಈ ಎರಡು ಪೋಸ್ಟ್ ಸಂಪೂರ್ಣವಾಗಿ, ವೈದ್ಯಕೀಯ ಕ್ಷೇತ್ರದಲ್ಲಿನ ದುರ್ನಡತೆ ಮತ್ತು ಅನೈತಿಕ ನಡವಳಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಇದು ಅಧಿಕಾರ ದುರುಪಯೋಗಗಳನ್ನು ಹೈಲೈಟ್ ಮಾಡಿದೆ. ಈ ಟ್ವಿಟ್ ವಿರುದ್ಧ ಹರಿಹಾಯ್ದಿರುವ ಚಿನ್ಮಯಿ ಶ್ರೀಪಾದ ಅವರು, ಪಿಜಿ ವಿದ್ಯಾರ್ಥಿಗಳು ತಾವು ಪಾಸಾಗಲು 18 ವರ್ಷದ ಹುಡುಗಿಯರನ್ನು ಎಚ್‌ಒಡಿಗೆ ಪೂರೈಸುತ್ತಿದ್ದರು ಎಂದು ಹೇಳಲಾಗಿದೆ. ಹಾಗಾದರೆ, ಹುಡುಗಿಯರು ಕಾಳಜಿಯನ್ನು ಯಾರು ವಹಿಸುತ್ತಾರೆ. ಪಿಜಿ ವಿದ್ಯಾರ್ಥಿಗಳು ವೈದ್ಯರಾಗುವ ಮೊದಲು ಪಿಂಪ್‌ಗಳು ಮತ್ತು ಮಾನವ ಕಳ್ಳಸಾಗಣೆದಾರರಾಗಿದ್ದರು ಎಂದು ಕಿಡಿಕಾರಿದ್ದಾರೆ.
ಖಂಡಿತವಾಗಿಯೂ ಅವನು ತುಂಬಾ ಶಕ್ತಿಶಾಲಿ ಆಗಿರಬಹುದು. ಯಾರೂ ಆತನ ಕ್ರೌರ್ಯವನ್ನು ಬಹಿರಂಗಪಡಿಸುವ ಧೈರ್ಯ ಮಾಡುವುದಿಲ್ಲವೋ ಅವರು ಯಾರೇ ಆಗಿರಲಿ ಅವರು ಪಿಂಪ್‌ಗಳಾಗಿರುತ್ತಾರೆ ಎಂದು ಚಿನ್ಮಯಿ ಹೇಳಿದ್ದಾರೆ. ಇದೀಗ ಈ ಟ್ವಿಟ್ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.