ತಪ್ಪುಗ್ರಹಿಕೆಯಿಂದ 2 ದಿನಗಳ ಅಂತರದಲ್ಲಿ ಇಬ್ಬರು ಯುವಪ್ರೇಮಿಗಳ ದುರಂತ ಸಾವು
Sunday, June 18, 2023
ಬೆಂಗಳೂರು: ತಪ್ಪುಗ್ರಹಿಕೆಯು ಎಂಥಹ ದುರಂತವನ್ನು ತಂದೊಡ್ಡುತ್ತದೆ ಎಂಬುದು ಬೆಂಗಳೂರಿನಲ್ಲಿ ನಡೆದ ಈ ಘಟಬೆಯಿಂದ ಸಾಬೀತಾಗಿದೆ. ತಾಳ್ಮೆಯಿಲ್ಲದೆ, ತಪ್ಪು ಗ್ರಹಿಕೆಯಿಂದ ಕೈಗೊಂಡ ನಿರ್ಧಾರದಿಂದ ಎರಡು ದಿನಗಳ ಅಂತರದಲ್ಲಿ ಪ್ರೇಮಿಗಳಿಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಧಾರಾ ಸಂಶುಕಾ ಹಾಗೂ ದೀಪೇಂದ್ರ ಕುಮಾರ್ ಮೃತಪಟ್ಟ ದುರ್ದೈವಿ ಪ್ರೇಮಿಗಳು. ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಆದರೆ ದೀಪೇಂದ್ರ ಕುಮಾರ್ ಗೆಳೆಯರಿಗೆ ಗುಡ್ ಬೈ ಎಂದು ಮೆಸೇಜ್ ಮಾಡಿ ಐದು ದಿನಗಳ ಹಿಂದೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದ. ಈತ ತನ್ನ ಪ್ರೇಯಸಿಯನ್ನು ಆಕೆಯ ಮನೆಯವರು ಕರೆದೊಯ್ದಿದ್ದಾರೆಂದು ಭಾವಿಸಿ, ಮನನೊಂದು ಸಾವಿಗೆ ಶರಣಾಗಿದ್ದ. ಯುವಕನ ಕುಟುಂಬದ ಮಾಹಿತಿಯನ್ವಯ ಮಾರತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಕಟ್ಟಡದ ಮೇಲಿನಿಂದ ಹಾರಿ ಧಾರ ಸಂಶುಕಾ ಆತ್ಮಹತ್ಯೆ ಮಾಡಿಕೊಂಡಳು. ಪರಿಶೀಲನೆ ವೇಳೆ ಆಕೆ ಪ್ರೇಮವೈಫಲ್ಯದಿಂದ ಆತ್ಮಹತ್ಯೆ ಎಂಬುದು ತಿಳಿದುಬಂದಿದೆ. ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ದೀಪೇಂದ್ರನೊಂದಿಗಿದ್ದ ಫೋಟೋಗಳು ಲಭ್ಯವಾಗಿದ್ದು, ಇಬ್ಬರು ಪ್ರೇಮ ವೈಫಲ್ಯದಿಂದ ಮೃತಪಟ್ಟಿರುವುದು ಪೊಲೀಸರಿಗೆ ಖಚಿತವಾಗಿದೆ.
ತನ್ನ ಪ್ರಿಯಕರ ಸಾವನ್ನಪ್ಪಿದ್ದಾನೆಂದು ಮನನೊಂದು ಯುವತಿ ಸಾವಿನ ಹಾದಿ ಹಿಡಿದಿದ್ದಾಳೆ. ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.