ಪ್ರೇಯಸಿ ಮೂಲಕ ಟೆಕ್ಕಿಯನ್ನು ಅಪಹರಿಸಿದ ದುಷ್ಕರ್ಮಿಗಳು: ರೆಸಾರ್ಟ್ ನಲ್ಲಿ ಕೂಡಿ ಹಲ್ಲೆ, 21ಲಕ್ಷ ರೂ. ಹಣ ದರೋಡೆ
Sunday, June 25, 2023
ಚಿಕ್ಕಬಳ್ಳಾಪುರ: ಟೆಕ್ಕಿಯನ್ನು ಪ್ರೇಯಸಿ ಹಾಗೂ ತಂಡ ಅಪಹರಿಸಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಟೆಕ್ಕಿಯನ್ನು ಕಿಡ್ನಾಪ್ ಮಾಡಿ ಮೂರು ದಿನಗಳ ಕಾಲ ರೆಸಾರ್ಟ್‌ವೊಂದರಲ್ಲಿ ಕೂಡಿ ಹಾಕಿದ್ದ ದುಷ್ಕರ್ಮಿಗಳು, ಆತನ ಮೇಲೆ ಹಲ್ಲೆ ನಡೆಸಿ ಎರಡು ಲ್ಯಾಪ್ ಟಾಪ್ ಗಳು, ಮೂರು ಮೊಬೈಲ್ ಗಳು, 12 ಗ್ರಾಂ ಬಂಗಾರದ ಚೈನ್ ಸೇರಿದಂತೆ 21 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಖಾಸಗಿ ಸಾಫ್ಟ್ ವೇರ್ ಕಂಪೆನಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ 32 ವರ್ಷದ ವಿಜಯಸಿಂಗ್ ಅಪಹರಣಕ್ಕೊಳಗಾದ ಟೆಕ್ಕಿ. ಈ ಟೆಕ್ಕಿಯನ್ನು ಆತನ ಪ್ರಿಯತಮೆಯ ನೆರವಿನೊಂದಿಗೆ ದೇವನಹಳ್ಳಿಗೆ ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳು ಆತನನ್ನು ಅಲ್ಲಿಂದ ಕಿಡ್ನಾಪ್ ಮಾಡಿದ್ದಾರೆ. ಆ ಬಳಿಕ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿಯಿರುವ ಕ್ಯೂವಿ.ಸಿ ವಿಲ್ಲಾ ರೆಸಾರ್ಟ್‌ಗೆ ಕರೆತಂದಿರುವ ಆರೋಪಿಗಳು ಆತನನ್ನು ವಿಲ್ಲಾದ ರೂಮ್ ನಂಬರ್ 36ರಲ್ಲಿ ಕೂಡಿ ಹಾಕಿ ಮೂರು ದಿನಗಳ ಕಾಲ ಹಲ್ಲೆ ಮಾಡಿದ್ದಾರೆ.
ಮೂಲತಃ ಆಂಧ್ರ ಪ್ರದೇಶದ ಅನಂತಪುರ ನಿವಾಸಿ ವಿಜಯಸಿಂಗ್ ನ ಬಳಿಯಿದ್ದ ಬೆಲೆಬಾಳುವ ವಸ್ತುಗಳು ಸೇರಿದಂತೆ 21 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ಟೆಕ್ಕಿ ವಿಜಯಸಿಂಗ್ ನ ಪ್ರೇಯಸಿ ಭಾವನಾ ರೆಡ್ಡಿ ಸೇರಿದಂತೆ ಪುಲ್ಲಾರೆಡ್ಡಿ, ಸುಬ್ರಮಣಿ, ನಾಗೇಶ ರೆಡ್ಡಿ, ಸಿದ್ದೇಶ, ಸುಧೀರ್ ಎಂಬವರ ವಿರುದ್ಧ ವಿಜಯ್ ಸಿಂಗ್ ದೂರು ದಾಖಲಿಸಿದ್ದಾನೆ.
ಪ್ರಕರಣದ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 506, 341, 504, 143, 149, 384, 323, 324 e soda ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತ ತೀವ್ರವಾಗಿ ಹಲ್ಲೆಗೊಳಗಾಗಿದ್ದ ವಿಜಯಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.