ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ: ಕನ್ಯಾಭಾಗ್ಯ ಜಾರಿಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದ 28ರ ಯುವಕ
Thursday, June 15, 2023
ಗದಗ: ಬೇರೆ ಬೇರೆ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿಕರು ಗ್ರಾಪಂಗೆ ಮನವಿ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಗುತ್ತಿಗೆದಾರ, ನನಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಆದ್ದರಿಂದ 'ಕನ್ಯಾ ಭಾಗ್ಯ' ಜಾರಿಗೊಳಿಸುವಂತೆ ಪಿಡಿಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾನೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಮದುವೆಯಾಗಲು ಹುಡುಗಿ ಹುಡುಕಿ ಸುಸ್ತಾದ ಗುತ್ತಿಗೆದಾರ ಮುತ್ತು ಹೂಗಾರ(28) ಎಂಬಾತ 'ಕನ್ಯಾ ಭಾಗ್ಯ' ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಿ ಮುಂಡರಗಿ ತಾಲೂಕಿನ ಡಂಬಳ ಗ್ರಾಪಂ ಪಿಡಿಒ ಮೂಲಕ ಮನವಿ ಪತ್ರ ಸಲ್ಲಿಸಿದ್ದಾನೆ.
ತಿಂಗಳಿಗೆ ತನಗೆ 50 ಸಾವಿರ ರೂ. ಆದಾಯವಿದೆ. ಆದರೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ನನಗೆ ಸಹೋದರ, ಸಹೋದರಿ ಯಾರೂ ಇಲ್ಲ. ಪ್ರತಿ ಹಳ್ಳಿ-ಹಳ್ಳಿ ಸುತ್ತಾಡಿ ಕನ್ಯೆ ನೋಡಿದ್ದೇನೆ. ಒಳ್ಳೆಯ ಆದಾಯವಿದೆ. ಆದರೆ ಸರ್ಕಾರಿ ಉದ್ಯೋಗ ಇಲ್ಲವೆಂದು ಯಾರೂ ಹೆಣ್ಣು ಕೊಡುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಬಂದಿದೆ. ನನಗೆ ಸಂಗಾತಿಯನ್ನು ಹುಡುಕಿ ಕೊಡಿ ಎಂದು ಗುತ್ತಿಗೆದಾರ ಅಳಲು ತೋಡಿಕೊಂಡಿದ್ದಾನೆ.
ಯಾವುದೇ ಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂದು ಹೇಳಿಕೊಂಡಿದ್ದಾನೆ. ಈತನ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಪಿಡಿಒ ತಿಳಿಸಿದ್ದಾರೆ.