ನಾಲ್ಕನೇ ಮಹಡಿಯಿಂದ ಬಾಲಕಿ ಪಾರಾಗಿದ್ದೇ ರೋಚಕ
Sunday, June 11, 2023
ಮುಂಬೈ: ಬಾಲಕಿಯೊಬ್ಬಳು 4ನೇ ಮಹಡಿಯಿಂದ ಜಾರಿ ಬಿದ್ದರೂ ಯುವಕನೋರ್ವನ ಮಡಿಲಿಗೆ ಬಿದ್ದು, ಯಾವುದೇ ರೀತಿಯ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾಳೆ. ಈ ಘಟನೆ ಮುಂಬೈನ ವಿರಾರ್ ಎಂಬಲ್ಲಿ ನಡೆದಿದೆ.
ಜೀವದಾನಿ ದರ್ಶನ್ ಎಂಬ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ಕಟ್ಟಡದೊಳಗೆ ನಡೆದಾಡಲು ದಾರಿಗೆ ಅಳವಡಿಸಿದ್ದ ಲೋಹದ ರೇಲಿಂಗ್ ಅನ್ನು ತೆಗೆದುಹಾಕಿ ಅದರ ಸುತ್ತಲೂ ಹಸಿರು ಹೊದಿಕೆಯನ್ನು ಹಾಕಲಾಗಿತ್ತು. ಆದರೆ ರಾತ್ರಿ 9ರ ಸುಮಾರಿಗೆ ದೇವಶಿ ಸಹಾನಿ ಎಂಬ ಬಾಲಕಿ ತನ್ನ ಮನೆಯಿಂದ ಹೊರಗೆ ಬಂದಿದ್ದಾಳೆ. ಆದರೆ ಈ ನಡೆದುಕೊಂಡು ಹೋಗುವಾಗ, ರೇಲಿಂಗ್ಸ್ ಇರದ ಹಿನ್ನೆಲೆಯಲ್ಲಿ ಹಸಿರು ಹೊದಿಕೆಗಳ ನಡುವೆ ಇದ್ದ ಅಂತರದ ಮೂಲಕ ಜಾರಿ ಕಳಗಡೆ ಕುಳಿತಿದ್ದ ಶಿವಕುಮಾರ್ ಜೈಸ್ವಾಲ್ ಎಂಬ ಯುವಕನ ಮಡಿಲಿಗೆ ಬಿದ್ದಿದ್ದಾಳೆ.
ಕೆಳಗಿನ ಮಹಡಿಗಳಲ್ಲಿ ವಾಸವಿದ್ದವರು ಮೊದಲಿಗೆ ನಿರ್ಮಾಣ ಸಾಮಗ್ರಿಗಳು ಬಿದ್ದಿರಬಹುದು ಎಂದು ಗ್ರಹಿಸಿದ್ದರು. ಆದರೆ ಜೈಸ್ವಾಲ್ ಮೂಲಕ ಘಟನೆ ಎಲ್ಲರಿಗೆ ತಿಳಿದಿದೆ. ತಕ್ಷಣ ಕಟ್ಟಡದ ನಿವಾಸಿಗಳು ಬಾಲಕಿಯ ಪೋಷಕರನ್ನು ಮಾಹಿತಿ ನೀಡಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ, ಅವಳ ಹಣೆಯ ಮೇಲೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ. ಆದರೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಾಲಕಿ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಜೈಸ್ವಾಲ್ ಗೂ ಪೆಟ್ಟಾಗಿದ್ದು ಆತನ ತೊಡೆಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಇದೀಗ ಬಿಲ್ಡರ್ ಮತ್ತು ಗುತ್ತಿಗೆದಾರನ ವಿರುದ್ಧ ವಿರಾರ್ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ.