ಮದುವೆ ಮನೆಯಲ್ಲಿ ವಿವಾದ: ಒಂದೇ ಕುಟುಂಬದ 9 ಸದಸ್ಯರನ್ನು ಗುಂಡಿಕ್ಕಿ ಹತ್ಯೆ
Thursday, June 29, 2023
ಪೇಷಾವರ: ಮದುವೆ ಮನೆಯಲ್ಲಿ ನಡೆದ ವಿವಾದದಲ್ಲಿ ಒಂದೇ ಕುಟುಂಬದ 9 ಸದಸ್ಯರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವಾಯವ್ಯ ಪಾಕಿಸ್ತಾನದ ಖೈಬರ್ ಪಬ್ಲೂಂಕ್ವ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಲಾಕಂಡ್ ಜಿಲ್ಲೆಯ ಬಟ್‌ಖೆಲಾ ತಾಲೂಕಿನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಮದುವೆಯ ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿದ ಗುಂಪು, ನಿದ್ದೆಯಲ್ಲಿದ್ದ 9 ಮಂದಿಯನ್ನು ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಂತೀಯ ಅರೆಸೇನಾ ಪಡೆ ಸ್ಥಳಕ್ಕೆ ಧಾವಿಸಿದ್ದು ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣವನ್ನು ಖಂಡಿಸಿರುವ ಉಸ್ತುವಾರಿ ಮುಖ್ಯಮಂತ್ರಿ ಮುಹಮ್ಮದ್ ಅಝಮ್‌ಖಾನ್ ಆರೋಪಿಗಳ ಪತ್ತೆಕಾರ್ಯ ಚುರುಕುಗೊಳಿಸಲು ಆದೇಶಿಸಿದ್ದು ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.