ಲಾರಿಗೆ ಹಿಂಬದಿಯಿಂದ ಢಿಕ್ಕಿಯಾದ ಕಾರು: ನಾಲ್ವರು ಯುವಕರ ದಾರುಣ ಸಾವು
Sunday, June 4, 2023
ಮಂಡ್ಯ: ಚಲಿಸುತ್ತಿದ್ದ ಲಾರಿಯೊಂದರ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ನಾಗಮಂಗಲ ತಾಲೂಕಿನ ತಿರುಮಲಪುರ ಗೇಟಿನ ಬೆಂಗಳೂರು- ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಬೆಂಗಳೂರಿನ ನೆಲಮಂಗಲ ಮೂಲದ ಹೇಮಂತ್, ಶರತ್ ಹಾಗೂ ನವೀನ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಲಾರಿ ಮತ್ತು ಕಾರು ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿತ್ತು. ಬೆಳಗಿನ ಜಾವ 5 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದಿದ್ದು, ನಾಲ್ವರು ಕಾರಿನಲ್ಲೇ ಅಸುನೀಗಿದ್ದಾರೆ. ಘಟನೆಯ ಬಳಿಕ ಲಾರಿ ಚಾಲಕ ಎಸ್ಕೆಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್ಪಿ, ಸಿಪಿಐ ಹಾಗೂ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.