ಕೆಎಸ್‌ಆರ್ ಟಿಸಿ ಬಸ್ ಡಿಕ್ಕಿ: ಶಾಪಿಂಗ್ ಗೆ ಹೋದ ಮಹಿಳೆ ಪತಿ - ಪುತ್ರಿ ಎದುರೇ ಸಾವು
Sunday, June 4, 2023
ಬೆಂಗಳೂರು: ಪತಿ - ಪುತ್ರಿಯೊಂದಿಗೆ ಸ್ಕೂಟಿಯಲ್ಲಿ ಶಾಪಿಂಗ್‌ಗೆ ಹೊರಟ ಮಹಿಳೆಯೊಬ್ಬರು ಕೆಎಸ್‌ಆರ್ ಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಬಳಿ ನಡೆದಿದೆ.
ಹೆಬ್ಬಾಳ ಬಳಿಯ ಕೆಂಪಾಪುರ ನಿವಾಸಿ ಲತಾ ಎಂಬಾಕೆ ಮೃತಪಟ್ಟವರು. ಎರಡು ದ್ವಿಚಕ್ರ ವಾಹನಗಳಲ್ಲಿ ಕುಟುಂಬಸ್ಥರು ಶಾಪಿಂಗ್ ಗೆ ಬಂದಿದ್ದಾರೆ. ಒಂದು ಸ್ಕೂಟಿಯಲ್ಲಿ ಪತಿಯೊಂದಿಗೆ ಲತಾ ಪ್ರಯಾಣಿಸುತ್ತಿದ್ದರು. ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆಯಿಂದ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಂದಿರುವ ಬಸ್ ಹಿಂಭಾಗದಿಂದ ಇವರಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಆಗ ಲತಾ ಅವರ ಮೇಲೆಯೇ ಬಸ್ ಹರಿದಿದೆ ಪರಿಣಾಮ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿ ಪುತ್ರಿ ಪ್ರಯಾಣಿಸುತ್ತಿದ್ದಳು. ಪತಿ ಹಾಗೂ ಪುತ್ರಿಯ ಎದುರೇ ಲತಾ ಸಾವಿಗೀಡಾದ್ದಾರೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ಡಿಪೋಗೆ ಸೇರಿದ ಈ ಬಸ್, ಬೆಂಗಳೂರಿನ ಚಿಂತಾಮಣಿ ಕಡೆಗೆ ಸಾಗುತ್ತಿತ್ತು. ಪ್ರಕರಣ ಸಂಬಂಧ ಚಾಲಕ-ನಿರ್ವಾಹಕ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.