ಐಪಿಎಸ್ ಅಧಿಕಾರಿ ಸೋಗಿನಲ್ಲಿ ಉತ್ತಮ ಪೋಸ್ಟಿಂಗ್ ಕೊಡಿಸುತ್ತೇನೆಂದು ಪೊಲೀಸರಿಗೇ ವಂಚನೆ- ಆರೋಪಿ ಅರೆಸ್ಟ್
Monday, June 12, 2023
ಬೆಂಗಳೂರು: ಐಪಿಎಸ್ ಅಧಿಕಾರಿಯೆಂದು ಸುಳ್ಳು ಹೇಳಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇನೆಂದು ಹಲವರಿಗೆ ವಂಚನೆ ಮಾಡಿದ್ದ ಆರೋಪಿಯನ್ನು ಕಾಟನ್‌ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮದ್ದೂರು ಮೂಲದ ವಿಶುಕುಮಾರ್ (45) ಬಂಧಿತ ಆರೋಪಿ. ಮಲ್ಲೇಶ್ವರ ನಿವಾಸಿ ಶ್ರೀನಿವಾಸ್ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಜೊತೆಗೆ ವರ್ಗಾವಣೆ ಮಾಡಿಸುವುತ್ತೇನೆಂದು ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ. ಇದೇ ರೀತಿ ಮಲ್ಲೇಶ್ವರ ನಿವಾಸಿ ಶ್ರೀನಿವಾಸ್ ಅವರಿಗೂ ತಾನು ಸಿಸಿಬಿ ಅಧಿಕಾರಿಯೆಂದು ನಂಬಿಸಿ ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಸದ್ಯ ನನಗೆ ತುರ್ತಾಗಿ ಹಣದ ಅವಶ್ಯಕತೆ ಇದೆಯೆಂದು ಹೇಳಿ 25 ಲಕ್ಷ ರೂ. ಪಡೆದುಕೊಂಡಿದ್ದಾನೆ.
ಆದರೆ ಹಣ ವಾಪಸ್ ಕೊಡುವಂತೆ ಕೆಲವು ದಿನಗಳ ಬಳಿಕ ಕೇಳಿದ್ದಾಗ 'ನನ್ನನ್ನೇ ದುಡ್ಡು ಕೇಳುತ್ತೀಯಾ, ಒದ್ದು ಒಳಗೆ ಹಾಕುತ್ತೇನೆ' ಎಂದು ಧಮ್ಮಿ ಹಾಕಿದ್ದಾನೆ. ಆದರೆ ಆತನ ಬಗ್ಗೆ ಅನುಮಾನಗೊಂಡ ಶ್ರೀನಿವಾಸ್ ಅವರು ಸಿಸಿಬಿಗೆ ಹೋಗಿ ಈತನ ಬಗ್ಗೆ ವಿಚಾರಿಸಿದ್ದಾಗ ಆರೋಪಿಯ ನಿಜಬಣ್ಣ ಬಯಲಾಗಿದೆ. ಬಳಿಕ ತಾವು ಮೋಸ ಹೋಗಿದ್ದೇನೆಂದು ತಿಳಿದ ಶ್ರೀನಿವಾಸ್ ಈ ಬಗ್ಗೆ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾನು ಎಸ್‌ಪಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ ವರ್ಗಾವಣೆ ದಂಧೆಯನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ. ತನ್ನ ಹೆಸರನ್ನು ಭುವನ್ ವಿ. ಕುಮಾರ್ ಎಂದು ಬದಲಿಸಿಕೊಂಡು ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಎಲ್ಲರಿಗೂ ಪರಿಚಯ ಮಾಡಿಕೊಳ್ಳುತ್ತಿದ್ದ. ಅಲ್ಲದೆ, ತನ್ನ ಸಂಬಂಧಿಕರು ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಅವರ ಮೂಲಕ ವರ್ಗಾವಣೆ ಮಾಡಿಸಿಕೊಡುತ್ತೇನೆ ಮತ್ತು ಒಳ್ಳೆಯ ಕಡೆ ಪೋಸ್ಟಿಂಗ್ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ.
ಈತನ ಮಾತಿಗೆ ಮರುಳಾದ ಕೆಲವು ಪೊಲೀಸರು ಪೋಸ್ಟಿಂಗ್ ಮಾಡಿಕೊಡಲು ಹಣ ನೀಡಿದ್ದಾರೆ. ಹೀಗೆ ಸುಮಾರು ಒಂದೂವರೆ ಕೋಟಿ ರೂ.ಗೂ ಅಧಿಕ ಹಣ ಪಡೆದಿದ್ದಾನೆ ಎನ್ನಲಾಗಿದೆ. ಹಣ ಪಡೆದ ಬಳಿಕ ಪೋಸ್ಟಿಂಗ್ ವಿಚಾರ ಕೇಳಿದಾಗ ಸಬೂಬು ಹೇಳುತ್ತಿದ್ದ. ಇದೇ ವೇಳೆ ಈತನ ಬಗ್ಗೆ ಕಾಟನ್‌ಪೇಟೆ ಪೊಲೀಸರಿಗೆ ದೂರು ಬಂದಿದ್ದು, ಕಾರ್ಯಾಚರಣೆಗೆ ಇಳಿದ ಪೊಲೀಸರು ಹಣ ಕೊಡುತ್ತೇನೆ ಅಂತ ದೂರುದಾರನ ಮೂಲಕ ಕರೆಸಿಕೊಂಡಿದ್ದಾರೆ. ಹಣ ಪಡೆಯಲು ಬಂದ ಆರೋಪಿಯನ್ನು ಬಂಧಿಸಿದ್ದಾರೆ.