
ಟಾಲಿವುಡ್ ನಿರ್ಮಾಪಕನ ಕಾಲ್ ಲಿಸ್ಟ್ ಪರಿಶೀಲನೆ ಆಶು ರೆಡ್ಡಿಗೆ ನೂರಾರು ಸಲ ಕಾಲ್: ನಟಿಗೆ ಎದುರಾಯ್ತು ಸಂಕಷ್ಟ
Saturday, June 24, 2023
ಹೈದರಾಬಾದ್: ಚಲ್ ಮೋಹನ್ ರಂಗ ಸಿನಿಮಾ ಪಯಣ ಆರಂಭಿಸಿರುವ ನಟಿ ಆಶು ರೆಡ್ಡಿ ಬಿಗ್‌ಬಾಸ್ ಸಿಸನ್ 3ರಲ್ಲಿ ಭಾಗವಹಿಸಿ ಭಾರೀ ಖ್ಯಾತಿಯನ್ನು ಪಡೆದಿದ್ದಾರೆ. ನಟಿ ಸಮಂತಾರನ್ನೇ ಹೋಲುವ ಆಶು ರೆಡ್ಡಿಯನ್ನು ಟಾಲಿವುಡ್ ನಲ್ಲಿ ಜೂನಿಯರ್ ಸಮಂತಾ ಎಂದೇ ಗುರುತಿಸಲಾಗುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ ಆಶು ರೆಡ್ಡಿ ಸದಾ ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ.
ಇದೀಗ ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಆಶು ರೆಡ್ಡಿ ಗರಂ ಆಗಿದ್ದಾರೆ. ಟಾಲಿವುಡ್ ಡ್ರಗ್ ಕೇಸ್‌ನಲ್ಲಿ ತಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ನಟಿ ತಳ್ಳಿಹಾಕಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದಿರುವ ಅವರು, ಕೆಲವು ಮಾಧ್ಯಮಗಳಲ್ಲಿ ತನ್ನ ಸಂಬಂಧದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಆದರೆ, ವಾಸ್ತವವಾಗಿ ನನಗೆ ಯಾರೊಂದಿಗೂ ಯಾವುದೇ ಸಂಬಂಧವಿಲ್ಲ. ಇವೆಲ್ಲವೂ ಕಟ್ಟುಕಥೆ. ಅಗತ್ಯ ಬಿದ್ದರೆ ಸಂಬಂಧಪಟ್ಟವರಿಗೆ ಸತ್ಯಾಸತ್ಯತೆ ವಿವರಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ತಮ್ಮ ಮೊಬೈಲ್ ಸಂಖ್ಯೆಯನ್ನು ತನ್ನ ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಪ್ರಚಾರ ಮಾಡುತ್ತಿರುವವರ ಮೇಲೂ ಆಶು ರೆಡ್ಡಿ ಸಿಟ್ಟಾಗಿದ್ದಾರೆ. ಇದನೆಲ್ಲಾ ಸಹಿಸಿ ಕೂರುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ಡ್ರಗ್ಸ್ ಕೇಸ್‌ನಲ್ಲಿ ಕಬಾಲಿ ನಿರ್ಮಾಪಕ ಕೆ.ಪಿ. ಚೌಧರಿಯವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಿಂದ ಟಾಲಿವುಡ್‌ನಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಈ ಪ್ರಕರಣದಲ್ಲಿ ಆಶು ರೆಡ್ಡಿ ಹೆಸರು ಥಳುಕು ಹಾಕಿಕೊಂಡಿದೆ. ಆದ್ದರಿಂದ ತಮ್ಮ ವಿರುದ್ಧ ಕೇಳಿಬರುತ್ತಿರುವ ಊಹಾಪೋಹಗಳಿಗೆ ಇನ್‌ಸ್ಟಾಗ್ರಾಂನಲ್ಲಿ ಆಶು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಪಕ ಕೆ.ಪಿ. ಚೌಧರಿ, ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಪುತ್ರರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಕೆಪಿ ಚೌಧರಿಯವರ ಕಾಲ್ ಲೀಸ್ಟ್ ಅನ್ನು ಡಿಕೋಡ್ ಮಾಡಿದ್ದಾರೆ. ಇದರೊಂದಿಗೆ ಬಿಗ್ ಬಾಸ್ ಸ್ಪರ್ಧಿ ಅಶುರೆಡ್ಡಿ ಹೆಸರು ಸಹ ಮುನ್ನೆಲೆಗೆ ಬಂದಿದೆ. ಕೆ.ಪಿ.ಚೌಧರಿ ನೂರಾರು ಸಲ ಆಶು ರೆಡ್ಡಿಗೆ ಫೋನ್ ಮಾಡಿ ಮಾತಾಡಿದ್ದಾರೆ. ಅಶುರೆಡ್ಡಿ ಅಲ್ಲದೆ, ತೆಲುಗು ಸಿನಿಮಾಗಳಲ್ಲಿ ಕೆಲ ಐಟಂ ಸಾಂಗ್ ಮಾಡಿರುವ ನಟಿ ಸೇರಿದಂತೆ 12 ಮಂದಿಯ ಹೆಸರನ್ನು ಕೆ.ಪಿ.ಚೌಧರಿ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಆಶು ರೆಡ್ಡಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ.