ಅತ್ತೆಮನೆಗೆ ಬಂದ ಅಳಿಯ ಅತ್ತೆಗೇ ಇರಿದು ಪರಾರಿ
Wednesday, June 14, 2023
ಬೆಂಗಳೂರು: ಹೆಣ್ಣು ಕೊಟ್ಟ ಅತ್ತೆಗೆ ಅಳಿಯನೋರ್ವನು ಚಾಕುವಿಂದ ಇರಿದಿರುವ ಅಮಾನುಷ ಘಟನೆಯೊಂದು ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ.
ಗೀತಾ ಚಾಕುವಿನಿಂದ ಇರಿತಕ್ಕೊಳಾಗಾಗಿರುವ ಅತ್ತೆ. ಮನೋಜ್ ಚಾಕು ಇರಿದ ಅಳಿಯ.
ಆರೋಪಿ ಮನೋಜ್ ತನ್ನ ಪತ್ನಿ ವರ್ಷಿತಾಗೆ ಕಿರುಕುಳ ನೀಡುತ್ತಿದ್ದ. ಪತಿಯ ದೌರ್ಜನ್ಯ ಸಹಿಸದೆ ಮನನೊಂದ ವರ್ಷಿತಾ ತವರು ಮನೆ ಸೇರಿದ್ದಳು ಎಂಬ ಆರೋಪ ಕೇಳಿಬಂದಿದೆ.
ತವರು ಸೇರಿದ್ದ ಪತ್ನಿಯನ್ನು ಕರೆತರಲು ಹೋಗಿದ್ದ ಮನೋಜ್, ಅತ್ತೆ ಮನೆಗೆ ಹೋಗಿದ್ದ. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ತಾರಕ್ಕೇರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಮನೋಜ್, ಅತ್ತೆ ಗೀತಾ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯ ಬಳಿಕ ಅತ್ತೆ ಗೀತಾ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿ ಅಳಿಯ ಮನೋಜ್‌ನನ್ನು ಬಂಧಿಸಿದ್ದಾರೆ.