ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆಗೈದ ಗ್ರಾಮಸ್ಥರು: ಪ್ರಶ್ನಿಸದೆ ಕುಣಿದು ಕುಪ್ಪಳಿಸಿದ ಪತಿರಾಯ
Thursday, June 1, 2023
ಅಹಮದಾಬಾದ್: ಪ್ರಿಯಕರನೊಂದಿಗೆ ಓಡಿ ಹೋಗಿದ್ದ ವಿವಾಹಿತೆಯನ್ನು ಗ್ರಾಮಸ್ಥರು ವಿವಸ್ತ್ರಗೊಳಿಸಿ ಮನಬಂದಂತೆ ಹಲ್ಲೆಗೈದಿರುವ ಘಟನೆ ಗುಜರಾತಿನ ದಾಹೋಡ್ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯವಿರುವ ಮಾರ್ಗಲಾ ಗ್ರಾಮದಲ್ಲಿ ನಡೆದಿದೆ. ವಿಚಿತ್ರವೆಂದರೆ ಆಕೆಯ ಪತಿ ಹಲ್ಲೆಯನ್ನು ಪ್ರಶ್ನಿಸದೆ ಕುಣಿದು ಕುಪ್ಪಳಿಸಿರುವ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಈ ವಿವಾಹಿತೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಬಳಿಕ ಮಹಿಳೆ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಂತೆ ಗ್ರಾಮಸ್ಥರು ಜೊತೆಗೂಡಿ ಆಕೆಯಿದ್ದಲ್ಲಿಗೆ ತೆರಳಿ ಮಹಿಳೆ ಹಾಗೂ ಆಕೆಯ ಪ್ರಿಯಕರನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಆಕೆಯ ಪತಿಯು ಪತ್ನಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸದೆ ಕುಣಿಯುತ್ತಿರುವುದು ಕಂಡು ಬಂದಿದೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯ ಸೀರೆಯನ್ನು ಬಲವಂತವಾಗಿ ಪ್ರೇಮಿಯ ತಲೆಗೆ ಕಟ್ಟುತ್ತಿರುವುದು ಕಂಡು ಬರುತ್ತದೆ. ಬಳಿಕ ಇವರಿಬ್ಬರನ್ನು ನಗ್ನವಾಗಿ ಗ್ರಾಮದ ತುಂಬಾ ಮೆರವಣಿಗೆ ಮಾಡಿಸಲಾಗಿದೆ ಎಂದು ವರದಿಯಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಹಾಜರಿದ್ದ ಮಹಿಳೆಯ ಪತಿ ತನ್ನ ಪತ್ನಿಯ ನೆರವಿಗೆ ಧಾವಿಸದೆ ಸಂತೋಷದಿಂದ ಕುಣಿಯುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಮಾರ್ಗಲಾ ಗ್ರಾಮದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.