ಶಾಸಕರೊಂದಿಗೆ ಕಿರಿಕ್ ಮಾಡಿದ ಟೋಲ್ ಸಿಬ್ಬಂದಿ: ಹೈವೆಯಲ್ಲಿ ಫ್ರೀಯಾಗಿ ಬಿಡುತ್ತಿದ್ದೀವಿ ಬಂದ್ವಾ ಹೋದ್ವಾ ಅನ್ನೋದನ್ನು ಕಲೀಬೇಕೆಂದು ಆವಾಜ್
Tuesday, June 6, 2023
ಬೆಂಗಳೂರು: ಬೆಂಗಳೂರು ಮೈಸೂರು - ಎಕ್ಸ್‌ಪ್ರೆಸ್ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾದಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಯವರ ಕಾರನ್ನು ತಡೆದ ಟೋಲ್ ಸಿಬ್ಬಂದಿ, ನಿಮಗೆ ಹೈವೆಯಲ್ಲಿ ಹೋಗೋದಕ್ಕೆ ಬಿಟ್ಟಿಯಾಗಿ ಬಿಡುತ್ತೇವೆ. ಆದ್ದರಿಂದ ನಾವು ಕಳಿಸಿದಾಗ ಹೋಗಬೇಕು ಎಂದು ಭಾರೀ ಜೋರಿನಲ್ಲಿ ಅವಾಜ್ ಹಾಕಿರುವ ಘಟನೆ ನಡೆದಿದೆ.
ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ಶಾಸಕರು, ಸಚಿವರು, ಸಂಸದರು ಹಾಗೂ ಕೆಲವು ಜನಪ್ರತಿನಿಧಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವಿದೆ. ಆದರೆ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿಯವರು ಬೆಂಗಳೂರಿನಿಂದ ಮಳವಳ್ಳಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್ ದಾಟಿ ಹೋಗುವ ಮುನ್ನ ಶಾಸಕರ ಪಾಸ್ ಕೂಡ ತೋರಿಸಲಾಗಿದೆ. ಆದರೂ, ನಿಮ್ಮನ್ನು ಬಿಟ್ಟಿಯಾಗಿ ಹೈವೇಯಲ್ಲಿ ಹೋಗೋಕೆ ಬಿಡುತ್ತೇವೆ. ನಾವು ಅನುಮತಿ ಕೊಟ್ಟಾಗಲೇ ನೀವು ಟೋಲ್ ದಾಟಿ ಹೋಗಬೇಕು ಎಂದು ಶಾಸಕರಿಗೆ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾನೆ.
ಬೆಂಗಳೂರು- ದಶಪಥ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿ ಕಿರಿಕ್ ಅಧಿಕವಾಗುತ್ತಿದ್ದು, ಜನಸಾಮಾನ್ಯರೊಂದಿಗೆ ಮಾತ್ರವಲ್ಲದೇ ಈಗ ಶಾಸಕರೊಂದಿಗೂ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೋಲಿಸರು ಬರಲಿ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಕ್ಕೆ ಯಾವ ಪೋಲಿಸರು ಬೇಕಾದರೆ ಬರಲಿ, ನಾನು ನೋಡಿರದ ಪೋಲಿಸಾ ಎಂದು ಏಕವಚನದಲ್ಲೇ ಟೋಲ್ ಸಿಬ್ಬಂದಿ ಶಾಸಕರಿಗೆ ಅವಾಜ್ ಹಾಕಿದ್ದಾನೆ. ನಿಮ್ಮನ್ನು ಹೈವೆಯಲ್ಲಿ ಬಿಟ್ಟಿ, ಫ್ರೀಯಾಗಿ ಬಿಡುತ್ತಿದ್ದೀವಿ ಎಂದು ನೀವೂ ಬಂದ್ವಾ ಹೋದ್ವಾ ಅನ್ನೋದನ್ನು ಕಲೀಬೇಕು ಎಂದು ಶಾಸಕರಿಗೆ ಏರು ಧ್ವನಿಯಲ್ಲೇ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾನೆ. ಜೊತೆಗೆ, ಟೋಲ್ ಸಿಬ್ಬಂದಿ ಶಾಸಕರಿಗೆ ಕೈ ತೋರಿಸುತ್ತಾ ಶಾಸಕ ನರೇಂದ್ರ ಸ್ವಾಮಿ ಜೊತೆ ಅನುಚಿತ ವರ್ತನೆ ತೋರಿದ್ದಾನೆ.