ಹುಸಿ ಬಾಂಬ್ ಕರೆಗೆ ಪ್ರಕರಣಕ್ಕೆ ವಿಚಿತ್ರ ತಿರುವು: ಇಬ್ಬರ ಜಗಳದಿಂದ ಪೊಲೀಸರು, ಕಂಪೆನಿ ಸುಸ್ತೋಸುಸ್ತು
Saturday, June 17, 2023
ಬೆಂಗಳೂರು: ಇಲ್ಲಿನ ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪೆನಿಯೊಂದಕ್ಕೆ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ಇದೀಗ ವಿಚಿತ್ರ ತಿರುವು ದೊರಕಿದೆ. ಟೀಂ ಲೀಡರ್ ನೊಂದಿಗಿನ ಜಗಳವೇ ಈ ಹುಸಿ ಬಾಂಬ್ ಕರೆಗೆ ಕಾರಣ ಎಂದು ತಿಳಿದು ಪೊಲೀಸರು ಹಾಗೂ ಕಂಪೆನಿ ಬೆಸ್ತು ಬಿದ್ದಿದೆ.
ಸದ್ಯ ಆರೋಪಿ ನವನೀತ್ ಪ್ರಸಾದ್‌ನ ಬಂಧನವಾಗಿದೆ. ತನಿಖೆ ವೇಳೆ ಆರೋಪಿ ಬಾಂಬ್ ಬೆದರಿಕೆ ಕರೆ ಯಾಕೆ ಹಾಕಿದ್ದು ಎಂದು ಬಾಯ್ದಿಟ್ಟಿದ್ದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ. ಟೀಂ ಲೀಡರ್ ಹಾಗೂ ನವನೀತ್ ನಡುವೆ ಸದಾ ಜಗಳ ನಡೆಯುತ್ತಿತ್ತು. ಈ ಜಗಳವೇ ಬಾಂಬ್ ಬೆದರಿಕೆ ಕರೆಗೆ ಕಾರಣ ಎಂದು ತನಿಖೆ ವೇಳೆ ಆರೋಪಿ ಬಾಯ್ದಿಟ್ಟಿದ್ದಾನೆ. ಆತ ಕರೆ ಮಾಡುವ ವೇಳೆ ತನ್ನ ಹೆಸರನ್ನು ಹೇಳಿಕೊಂಡೇ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನವನೀತ್ ಪ್ರಸಾದ್ ಗೆ ಟೀಂ ಲೀಡರ್ ನೊಂದಿಗೆ ಆಗಾಗ ಜಗಳ ಆಗುತ್ತಿತ್ತು. ಈ ಸಂದರ್ಭ, ನವನೀತ್, ತಾನು ಕಂಪೆನಿಯ ಎಂಡಿಯನ್ನು ಭೇಟಿ ಮಾಡಬೇಕು ಎಂದಿದ್ದ. ಆದರೆ ಭೇಟಿಗೆ ಅವಕಾಶ ಕಲ್ಪಿಸಿರಲಿಲ್ಲ. ಇಷ್ಟಕ್ಕೇ ಸಿಟ್ಟಾಗಿದ್ದ ನವನೀತ್, ಕೆಲಸ ತೊರೆದು ಹೋಗಿದ್ದ. ಆದರೂ, ಟೀಂ ಲೀಡರ್ ಮೇಲಿದ್ದ ಕೋಪಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಎನ್ನಲಾಗಿದೆ. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.