ವಿವಾಹವಾಗಿ ನಾಲ್ಕೇ ದಿನಕ್ಕೆ ಪತಿ ಮನೆ ತೊರೆದು ತವರು ಸೇರಿದ ನವವಧು: ಕಾರಣ ಏನು ಗೊತ್ತೇ?
ಪಾಟ್ನಾ: ವಿವಾಹವಾಗಿ ಆಗಷ್ಟೇ ಪತಿಯ ಮನೆಗೆ ಕಾಲಿರಿಸಿದ್ದ ನವವಧುವೊಬ್ಬಳು ಬರೀ ನಾಲ್ಕೇ ದಿನಕ್ಕೆ ಪತಿಯ ಮನೆಯನ್ನೇ ತೊರೆದು ತವರು ಮನೆ ಸೇರಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಸಬಾ ಖಾತೂನ್ ಹಾಗೂ ಇಲಿಯಾಸ್ ಎಂಬವರ ವಿವಾಹ ಇತ್ತೀಚೆಗೆ ನಡೆದಿತ್ತು. ಆದರೆ ವಿವಾಹ ನಡೆದ ಕೇವಲ ನಾಲ್ಕೇ ದಿನಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಸಬಾ ತನ್ನ ಪತಿಯ ಮನೆಯನ್ನೇ ತೊರೆದಿದ್ದಾಳೆ. ಸಬಾ ವಿವಾಹವಾಗಿ ಪತಿಯ ಮನೆಗೆ ಬಂದಾಗಿನಿಂದ ದಿನವೂ ಮೊಬೈಲ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಳು. ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುತ್ತಿದ್ದ ಸೊಸೆಯನ್ನು ಕಂಡು ಅತ್ತೆ ಕೆಂಡಾಮಂಡಲರಾಗುತ್ತಿದ್ದರು. ಅಲ್ಲದೆ ಸಬಾಳಿಗೆ ಮೊಬೈಲ್ ಬಳಸಬೇಡ ಎಂದು ಬುದ್ಧಿ ಹೇಳಿದ್ದಾರೆ.
ಇದೇ ವಿಚಾರವಾಗಿ ಪತಿ ಇಲಿಯಾಸ್ ಕೂಡ ತನ್ನ ಪತ್ನಿ ಸಬಾಳಿಗೆ ಜೋರು ಮಾಡಿ ಬುದ್ಧಿ ಹೇಳಿದ್ದಾನೆ. ಪರಿಣಾಮ ಸಿಟ್ಟಾದ ಸಬಾ ಈ ವಿಚಾರವನ್ನು ತನ್ನ ಸಹೋದರನಿಗೆ ಹೇಳಿದ್ದಾಳೆ. ಸಹೋದರ ತಂಗಿಯ ಮನೆಗೆ ಬಂದು ಇಲಿಯಾಸ್ ಹಣೆಗೆ ಗನ್ ತೋರಿಸಿದ್ದಾನೆ. ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಬಗ್ಗೆ ಇಲಿಯಾಸ್ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಸಬಾಳ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಎರಡೂ ಮನೆಯವರನ್ನು ಪೊಲೀಸರು ಠಾಣೆಗೆ ಕರೆಸಿ ಸಮಸ್ಯೆಯನ್ನು ಆಲಿಸಿದ್ದಾರೆ. ತನ್ನ ಪುತ್ರಿಯ ಮೊಬೈಲ್ ಫೋನ್ ಅನ್ನು ಆಕೆಯ ಮನೆಯವರು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ, ಅವರು ತಮ್ಮ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸಬಾ ತಾಯಿ ರಜಿಯಾ ಖಾನ್ ಹೇಳಿದ್ದಾರೆ. ತಾನು ಪತಿ ಹಾಗೂ ಅತ್ತೆಯಿಂದ ದೂರವಾಗುವುದಾಗಿ ಪೊಲೀಸರಿಗೆ ಸಬಾ ಹೇಳಿದ್ದಾಳೆ. ಸದ್ಯ ಪತಿಯನ್ನು ತೊರೆದು ಸಬಾ ಪೋಷಕರೊಂದಿಗೆ ಇದ್ದಾರೆ.