ಫಾದರ್ಸ್ ಡೇಯಂದೇ ಮಕ್ಕಳಿಬ್ಬರನ್ನು ಬೆನ್ನಿಗೆ ಕಟ್ಕೊಂಡು ಬಾವಿಗೆ ಹಾರಿದ ತಂದೆ: ಮೂವರೂ ದುರ್ಮರಣ
Sunday, June 18, 2023
ಕಲಬುರಗಿ: ಇಂದು ವಿಶ್ವ ತಂದೆಯ ದಿನದ ಸಂತೋಷದಲ್ಲಿ ಹಲವರು ವಿವಿಧ ರೀತಿಯಲ್ಲಿ ತಂದೆಯೊಂದಿಗೆ ಸಂಭ್ರಮಿಸಿದ್ದಾರೆ. ಕೆಲವರು ಅಗಲಿದ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ಆದರೆ ಅಪ್ಪಂದಿರ ದಿನವೇ ಇಲ್ಲೊಬ್ಬ ತಂದೆಯು ತನ್ನಿಬ್ಬರು ಮಕ್ಕಳೊಂದಿಗೆ ಕೊನೆಯ ದಿನವಾಗಿಸಿದ್ದಾನೆ.
ಹೌದು... ವರ್ಲ್ಡ್ ಫಾದರ್ಸ್ ಡೇಯಂದೇ ತನ್ನಿಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ತಂದೆಯೊಬ್ಬ ಬಾವಿಗೆ ಹಾರಿದ್ದಾನೆ. ಪರಿಣಾಮ ಮೂವರೂ ಸಾವಿಗೀಡಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಪೋಚಾವರಂನಲ್ಲಿ ನಡೆದಿದೆ.
ಹನುಮಂತ (36) ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ತಂದೆ. ಅಕ್ಷತಾ(6) ಮೃತಪಟ್ಟ ಪುತ್ರಿ, 9 ಓಂಕಾರ್(9) ಮೃತಪಟ್ಟ ಪುತ್ರ.
ಪತ್ನಿ ಹಾಗೂ ಮಕ್ಕಳೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದ ಹನುಮಂತ, ನಿನ್ನೆ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದನು. ಆದರೆ ಮಕ್ಕಳಿಬ್ಬರನ್ನು ಬೆನ್ನಿಗೆ ಕಟ್ಟಿಕೊಂಡ ಬಾವಿಗೆ ಹಾರಿದ್ದಾನೆ. ಪರಿಣಾಮ ಮೂವರೂ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.