ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ- ಜೂನ್ ಜುಲೈನಲ್ಲಿ ಮಹಾಮಾರಿ ಪ್ರತ್ಯಕ್ಷ
Tuesday, June 6, 2023
ಮಂಗಳೂರು: ಜೂನ್-ಜುಲೈನಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳು ಅತಿ ಹೆಚ್ಚು ವರದಿಯಾಗುವ ಹಿನ್ನಲೆಯಲ್ಲಿ ಅದಕ್ಕೆ ಕಾರಣವಾಗುವ ಸೊಳ್ಳೆಗಳು ಉತ್ಪತ್ತಿಯಾಗದಂತೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಅವರು ನಿರ್ದೇಶನ ನೀಡಿದರು.
ಅವರು ಜೂ.5ರ ಸಂಜೆ ನಗರದ ಜಿಲ್ಲಾ ಪಂಚಾಯತ್ ನ ವಿಡಿಯೋ ಕಾನ್ಫರೆನ್ಸ್‍ಹಾಲ್‍ನಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೆಂಗಿನ ಚಿಪ್ಪು, ಟಯರ್, ಟ್ಯೂಬ್, ಪ್ಲಾಸ್ಟಿಕ್ ಸೇರಿದಂತೆ ಸೊಳ್ಳೆಗಳು ಉತ್ಪತ್ತಿಯಾಗುವ ತ್ಯಾಜ್ಯಗಳ ಮೂಲವನ್ನು ಸಮರ್ಪಕ ನಿರ್ವಹಣೆ ಮಾಡಬೇಕು. ಮನೆಯ ಸುತ್ತಮತ್ತ, ತಾರಸಿ ಹಾಗೂ ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‍ಗಳ ಮುಚ್ಚಳಗಳನ್ನು ಭದ್ರವಾಗಿ ಮುಚ್ಚಿಡಬೇಕು ಇದರೊಂದಿಗೆ ಶುದ್ಧ ಕುದಿಸಿದ ನೀರನ್ನೇ ಕುಡಿಯುವ ಮೂಲಕ ಡೆಂಗ್ಯೂ-ಮಲೇರಿಯಾ ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಹೇಳಿದರು.
ನಮ್ಮ ನೆರೆಹೊರೆಯವರಿಗೆ, ಕಾರ್ಮಿಕರಿಗೆ, ಮಕ್ಕಳಿಗೆ, ವ್ಯಾಪಾರಸ್ಥರಿಗೆ, ಕಟ್ಟಡ ನಿರ್ಮಾಣದ ಕಂಟ್ರಾಕ್ಟರುಗಳು ಸೇರಿದಂತೆ ಎಲ್ಲರಲ್ಲೂ ಸಮರ್ಪಕ ತ್ಯಾಜ್ಯ ವಿಲೇವಾರಿ, ಮನೆ, ಶಾಲೆ, ಕಚೇರಿ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಡೆಂಗ್ಯೂ ಮತ್ತು ಮಲೇರಿಯಾದ ಬಗ್ಗೆ ಅರಿವು ಮೂಡಿಸುವುದು, ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ಘನ ತ್ಯಾಜ್ಯ ವಿಲೇವಾರಿ ಮಾಡಿ ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡಬಾರದು, ಟೈಯರ್ ಪಂಚರ್ ಅಂಗಡಿಗಳಲ್ಲಿ ಮತ್ತು ವಾಣಿಜ್ಯ ಸಂಕಿರ್ಣಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಹಾಗೂ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಇಲಾಖೆಯಿಂದ ನೋಟಿಸ್ ನೀಡುವುದು, ದಂಡ ವಿಧಿಸುವುದು ಅಥವಾ ಪರವಾನಗಿ ರದ್ದು ಪಡಿಸುವುದು, ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳನ್ನು ಗುರುತಿಸಿ ಪಂಚಾಯತ್ ನಲ್ಲಿ ಮಲೇರಿಯಾ ನಿಯಂತ್ರಣದ ಕುರಿತು ಸೂಕ್ತ ನಿರ್ಣಯ ಕೈಗೊಂಡು ದಂಡ ಹಾಗೂ ನೋಟೀಸು ನೀಡುವಂತೆ ಎಚ್ಚರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ವೆನ್‍ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸದಾಶಿವ್ ಶಾನುಭೋಗ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ ಕುಲಾಲ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು, ಖಾಸಗಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.