ಪ್ರೀತಿ ಮಾತಿಗೆ ಮರುಳಾದ ಪತಿಯನ್ನು ಮರಕ್ಕೆ ಕಟ್ಟಿಹಾಕಿ ಪತ್ನಿ : ಆಮೇಲೆ ಆದದ್ದು ಘೋರ ದುರಂತ
Tuesday, June 13, 2023
ಬಿಹಾರ: ಪತಿಯನ್ನೇ ಮರಕ್ಕೆ ಕಟ್ಟಿ ಹಾಕಿರುವ ಪಾಪಿ ಪತ್ನಿಯೋರ್ವಳು ಆತನನ್ನು ಜೀವಂತವಾಗಿ ಸುಡಲು ಯತ್ನಿಸಿದ ಘಟನೆ ಮುಜಾಫರ್‌ಪುರದ ದೇವಸ ಗ್ರಾಮದಲ್ಲಿ ನಡೆದಿದೆ. ತನಗೆ ಪತಿ ಇಷ್ಟವಿಲ್ಲವೆಂದು ಆಕೆ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಶಂಭು ಕುಮಾರ್(26) ಎಂಬ ಯುವಕನಿಗೆ ಕಳೆದ ವರ್ಷ ಜೂನ್ 1ರಂದು ಗಿಜಾಸ್ ಗ್ರಾಮದ ಛೋಟಿ ಕುಮಾರಿ(22) ಎಂಬಾಕೆಯೊಂದಿಗೆ ಮದುವೆಯಾಗಿದೆ. ಛೋಟಿ ಕುಮಾರಿಗೆ ಪತಿ ಇಷ್ಟವಿರಲಿಲ್ಲ. ಆದ್ದರಿಂದ ಪತಿಯನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಲು ಮುಂದಾಗಿದ್ದಾಳೆ. ಮೊದಲು ಪತಿಯನ್ನು ತನ್ನ ಮೋಹದ ಬಲೆಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿ, ಮರಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ. ಆಕೆ ಮರಕ್ಕೆ ಕಟ್ಟಿಹಾಕಿ ಬೆಂಕಿ ಕೊಡುತ್ತಿದ್ದಂತೆ ಶಂಭುಕುಮಾರ್ ಕಿರುಚಾಡಲು ಆರಂಭಿಸಿದ್ದಾನೆ. ಹತ್ತಿರದ ನಿವಾಸಿಗಳು ತಕ್ಷಣ ಆಗಮಿಸಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಶಂಭು ಕುಮಾರ್‌ನ ದೇಹದಲ್ಲಿ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಂಭು ಕುಮಾರ್ ನೀಡಿರುವ ದೂರಿನ ಮೇರೆಗೆ ಸಾಹೇಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಛೋಟಿ ಕುಮಾರಿಯನ್ನು ಪೊಲೀಸರು ಬಂದಿಸಿದ್ದಾರೆ. ಮದುವೆಯಾದಾಗಿನಿಂದಲೂ ಪತ್ನಿ ತನ್ನೊಂದಿಗೆ ನಿತ್ಯವೂ ಜಗಳವಾಡುತ್ತಿದ್ದಳು. ಆದರೆ ಆಕೆ ತವರು ಮನೆಯಿಂದ ಹಿಂತಿರುಗಿದ ಬಳಿಕ ಪ್ರೀತಿಸುವ ನೆಪದಲ್ಲಿ ಮನೆಯ ಹಿಂದಿನ ತೋಟಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದಾಳೆ ಎಂದು ಸಂತ್ರಸ್ತ ಶಂಭು ಕುಮಾರ್ ದೂರಿನಲ್ಲಿ ತಿಳಿಸಿದ್ದಾನೆ.