ಮೆಡಿಕಲ್ ವಿದ್ಯಾರ್ಥಿಗಳ ಹೈಟೆಕ್ ಗಾಂಜಾ ದಂಧೆ: ಬಾಡಿಗೆ ಮನೆಯಲ್ಲೇ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ ಮೂವರು ಅರೆಸ್ಟ್
ಶಿವಮೊಗ್ಗ: ಬಾಡಿಗೆ ಮನೆಯಲ್ಲಿಯೇ ಹೈಟೆಕ್ ಕೃಷಿಯ ಮೂಲಕ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಮೂವರು ಮೆಡಿಕಲ್ ವಿದ್ಯಾರ್ಥಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ, ತಮಿಳುನಾಡು ಮೂಲದ ವಿದ್ಯಾರ್ಥಿಗಳಾದ ವಿಘ್ನರಾಜ್, ಪಾಂಡಿದೊರೈ, ವಿನೋದ್ ಕುಮಾರ್ ಬಂಧಿತ ಆರೋಪಗಳು. ಇವರು ಮೆಡಿಕಲ್ ವ್ಯಾಸಾಂಗ ಪೂರ್ಣಗೊಳಿಸಿ, ಇಂಟರ್ನ್ಶಿಪ್ ಮಾಡುತ್ತಿದ್ದರು.
ಆರೋಪಿಗಳು ಹೈಟೆಕ್ ಕೃಷಿಯ ಮೂಲಕ ಮನೆಯಲ್ಲೇ ಗಾಂಜಾ ಬೆಳೆದು ಇತರೆ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದರು. ಬಂಧಿತರಿಂದ ಪೊಲೀಸರು227 ಗ್ರಾಂ ಗಾಂಜಾ, 1.53 ಕೆಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳಿರುವ ಸಣ್ಣ ಬಾಟಲಿ, 3 ಕೆನಾಬಿಲ್ ಆಯಿಲ್ ಸಿರಂಜ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ, 4 ಹುಕ್ಕಾ ಕ್ಯಾಪ್, ಗಾಂಜಾ ಗಿಡದ ಕಾಂಡ, 19 ಸಾವಿರ ರೂ. ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಬಾಡಿಗೆ ಮನೆಯ ಒಳಗಡೆಯೇ ಹೈಟೆಕ್ ಟೆಂಟ್ ನಿರ್ಮಾಣ ಮಾಡಿ ಗಾಂಜಾ ಬೆಳೆಯುತ್ತಿದ್ದರು. ಬಳಿಕ ಗಾಂಜಾವನ್ನು ಪುಡಿ ಮಾಡಿ ಇತರೆ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಣ್ಣ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ದಾಳಿ ನಡೆಸಿ
ಆರೋಪಿಗಳನ್ನು ಬಂಧಿಸಿದ್ದಾರೆ.