ಸಂದೇಶ ರವಾನೆಗೆ ಮೊಬೈಲ್, ಇಂಟರ್ ನೆಟ್ ತೊರೆದು ಬಾಲಕಿಯರನ್ನು ಬಳಸುತ್ತಿರುವ ಉಗ್ರರು
Monday, June 12, 2023
ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಇದೀಗ ತನ್ನ ಭಯೋತ್ಪಾದನಾ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಕಾಶ್ಮೀರ ಕಣಿವೆಯ ಬಾಲಕಿಯರು, ಮಹಿಳೆಯರು ಹಾಗೂ ಬಾಲಾಪರಾಧಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಸೇನಾ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಮರ್ ದೀಪ್ ಸಿಂಗ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಆಘಾತಕಾರಿ ಅಂಶವನ್ನು ಹೇಳಿಕೊಂಡಿದ್ದಾರೆ. 'ಉಗ್ರ ಕೃತ್ಯಗಳನ್ನು ಎಸಗಲು ಅನುಸರಿಸುತ್ತಿದ್ದ ಸಾಂಪ್ರದಾಯಿಕ ಸಂವಹನ ವಿಧಾನಗಳಿಗೆ ಐಎಸ್‌ಐ ವಿದಾಯ ಹೇಳಿದೆ. ಸಂದೇಶಗಳ ರವಾನೆಗೆ ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳ ಬಳಕೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಅದರ ಬದಲಾಗಿ ಹೊಸ ದಾರಿ ಕಂಡುಕೊಳ್ಳಲಾಗಿದ್ದು, ಶಸ್ತಾಸ್ತ್ರಗಳ ಸಾಗಾಟ, ಮಾದಕವಸ್ತುಗಳ ಸಾಗಾಟ, ವಿಧ್ವಂಸಕ ಯೋಜನೆಗಳ ಸಂದೇಶಗಳನ್ನು ಕಳುಹಿಸಲು ಮಹಿಳೆಯರು, ಬಾಲಕಿಯರು, ಬಾಲಾಪರಾಧಿಗಳನ್ನು ದುರ್ಬಳಕೆ ಮಾಡುವ ಆಘಾತಕಾರಿ ತಂತ್ರವನ್ನು ಅನುಸರಿಸುತ್ತಿದೆ. ಕೆಲವು ಪ್ರಕರಣಗಳನ್ನು ಭೇದಿಸಿ, ತನಿಖೆ ನಡೆಸಿದ ಸಂದರ್ಭ ಈ ಅಂಶ ಬೆಳಕಿಗೆ ಬಂದಿದೆ' ಎಂದು ಅಮರ್‌ದೀಪ್ ಸಿಂಗ್ ಹೇಳಿದ್ದಾರೆ.
ಐಎಸ್‌ಐ ಜತೆಗೆ ಪಾಕ್ ಮೂಲದ ಉಗ್ರ ಸಂಘಟನೆಗಳ ಮುಖ್ಯಸ್ಥರೂ ಇದೇ ತಂತ್ರದ ಮೊರೆ ಹೋಗುತ್ತಿದ್ದಾರೆ. ಈ ರೀತಿಯ ಭಯೋತ್ಪಾದನೆ ಅತ್ಯಂತ ಗಂಭೀರ ಹಾಗೂ ಕಳವಳಕಾರಿ, ಈ ಜಾಲವನ್ನು ಪತ್ತೆ ಹಚ್ಚಿ ಇಂಥ ಅಪಾಯಕಾರಿ ಟ್ರೆಂಡ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭೂಸೇನೆ ಮತ್ತು ಇತರ ತನಿಖಾ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ ಎಂದೂ ಅವರು ತಿಳಿಸಿದ್ದಾರೆ.