ಉಳ್ಳಾಲ: ಮೆಹಂದಿ ಶಾಸ್ತ್ರದಂದೇ ನಾಪತ್ತೆಯಾದ ವರ ಬಳ್ಳಾರಿಯಲ್ಲಿರುವ ಸುಳಿವು - ಇನ್ನೆಂದೂ ಮನೆಗೆ ಬರಲಾರೆ ಎಂಬ ಸಂದೇಶ ರವಾನೆ
Monday, June 5, 2023
ಉಳ್ಳಾಲ: ಮೆಹಂದಿ ಶಾಸ್ತ್ರದ ದಿನವೇ ನಾಪತ್ತೆಯಾಗಿದ್ದ ವರ್ಕಾಡಿ ಗ್ರಾಮದ ನಿವಾಸಿ ಕಿಶನ್ ಶೆಟ್ಟಿ ಎಂಬ ಯುವಕ ಬಳ್ಳಾರಿಯಲ್ಲಿ ಇರುವ ಸುಳಿವು ಲಭ್ಯವಾಗಿದೆ. ಆತ ತಾನು ಇನ್ನೆಂದೂ ಮನೆಗೆ ಬರುವುದಿಲ್ಲ ಎಂದು ಹೇಳಿದ್ದು, ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದು, ಕರೆ ತರಲು ಸಜ್ಜಾಗಿದ್ದಾರೆ.
ವರ್ಕಾಡಿಯ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿಯವರ ಪುತ್ರ ಕಿಶನ್ ಶೆಟ್ಟಿ ಮೇ 31ರಂದು ತನ್ನ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದವರು, ಆ ಬಳಿಕದಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಲವು ಊಹಾಪೋಹಗಳನ್ನು ಸೃಷ್ಟಿಯಾಗಿತ್ತು. ಕಿಶನ್ ಶೆಟ್ಟಿ ಕುಂಜತ್ತೂರು ಬಳಿಯ ಅನ್ಯಜಾತಿಯ ಯುವತಿಯನ್ನು ಕಾಲೇಜು ಸಹಪಾಠಿಯಾಗಿದ್ದಾಗಲೇ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಬೇರೊಂದು ಅವರು ಬೇರೊಬ್ಬ ಯುವತಿಯೊಂದೊಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕದಿಂದ ಅವರು ಪ್ರೀತಿಸುತ್ತಿದ್ದ ಯುವತಿಯನ್ನು ಕಡೆಗಣಿಸುತ್ತಾ ಬಂದಿದ್ದಾರೆ ಎನ್ನಲಾಗಿದೆ.
ಪರಿಣಾಮ ಸಿಟ್ಟುಗೊಂಡ ಕಿಶನ್ ಶಟ್ಟಿಯ ಪ್ರೇಯಸಿ ತನ್ನನ್ನು ಬಿಟ್ಟು ಬೇರೆ ಯಾರನ್ನೇ ಮದುವೆಯಾದರೂ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅಲ್ಲದೆ ಮದುವೆ ಮಂಟಪಕ್ಕೆ ಬಂದು ಪ್ರೀತಿಯ ವಿಚಾರ ತಿಳಿಸುವುದಾಗಿ ಬೆದರಿಕೆ ಒಡ್ಡಿದ್ದಳು ಎನ್ನಲಾಗಿದೆ. ಇದರಿಂದ ಮೆಹಂದಿ ಶಾಸ್ತ್ರದಂದೇ ಕಿಶನ್ ಶೆಟ್ಟಿ ನಾಪತ್ತೆಯಾಗಿದ್ದ.
ನಾಪತ್ತೆ ಬಳಿಕ ಆ ಯುವತಿ ಕಮೀಷನರ್ ಕಚೇರಿಯಲ್ಲೂ ಇದೇ ಮಾತನ್ನು ಉಲ್ಲೇಖಿಸಿದ್ದು ಮೂರು ಪುಟದಲ್ಲಿ ಕಿಶನ್ ಪ್ರೀತಿಗೆ ವಂಚನೆ ಮಾಡಿದ್ದಾನೆ ಎಂಬುದಾಗಿ ದೂರು ನೀಡಿದ್ದಾಳೆ ಎನ್ನಲಾಗಿದೆ. ರವಿವಾರ ಮಧ್ಯಾಹ್ನ ತಂಗಿ ಮೊಬೈಲ್ ಗೆ ತಾನು ಬಳ್ಳಾರಿಯಲ್ಲಿ ಇರುವುದಾಗಿ ಕಿಶನ್ ಸಂದೇಶ ಕಳಿಸಿದ್ದಾನೆ. ಅಲ್ಲದೆ ತಾನು ಮತ್ತೆಂದೂ ಮನೆಗೆ ಬರಲಾರೆ ಎಂದೂ ಬರೆದುಕೊಂಡಿದ್ದಾನೆ. ಈ ಬಗ್ಗೆ ಕೊಣಾಜೆ ಪೊಲೀಸರು ಲೊಕೇಶನ್ ಹುಡುಕಿದಾಗ ಬಳ್ಳಾರಿಯ ಗ್ರಾಮಾಂತರ ಭಾಗವೊಂದರ ಟವರ್ ಲೊಕೇಶನ್ ತೋರಿಸಿದೆ. ಇದೀಗ ಕಿಶನ್ ಶೆಟ್ಟಿಯನ್ನು ಕರೆ ತರಲು ಪೊಲೀಸರು ಸಜ್ಜಾಗಿದ್ದಾರೆ.