ಉಪ್ಪಿನಂಗಡಿ: ಪುಟ್ಟ ಮಕ್ಕಳಿಬ್ಬರನ್ನು ಮನೆಯೊಂದರಲ್ಲಿ ಬಿಟ್ಟು ದಂಪತಿ ನಾಪತ್ತೆ
Tuesday, June 6, 2023
ಉಪ್ಪಿನಂಗಡಿ: ಒಂದು ತಿಂಗಳ ಹಸುಗೂಸು ಸಹಿತ ಮಕ್ಕಳಿಬ್ಬರನ್ನು ಮನೆಯೊಂದರಲ್ಲಿ ಬಿಟ್ಟು ಹೆತ್ತವರು ನಾಪತ್ತೆಯಾಗಿರುವ ವಿಚಿತ್ರ ಘಟನೆಯೊಂದು ಉಪ್ಪಿನಂಗಡಿಯ ಕರಾಯ ಬಳಿ ನಡೆದಿದೆ.
ಕರಾಯದಲ್ಲಿ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿದ್ದ ಅಲೆಮಾರಿ ಜನಾಂಗದ ದಂಪತಿ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಮಕ್ಕಳನ್ನು ತೊರೆದು ಹೋದವರು.ಈ ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗು ಮತ್ತು ಒಂದು ತಿಂಗಳ ಹೆಣ್ಣು ಮಗುವಿತ್ತು. ಮದ್ಯವ್ಯಸನಿಗಳಾದ ಈ ದಂಪತಿ ಜೂ.2ರಂದು ಕರಾಯ ಗ್ರಾಮದ ಫಾತಿಮಾ ಎಂಬವರ ಮನೆಯಲ್ಲಿ ಮಕ್ಕಳನ್ನು ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಹೋದವರು ವಾಪಸ್ ಆಗಲೇ ಇಲ್ಲ
ಇದೀಗ ಫಾತಿಮಾ 2 ದಿನ ಕಳೆದರೂ ದಂಪತಿ ಕಾಣಿಸಿಕೊಳ್ಳದಿರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಗಳು ಮಕ್ಕಳನ್ನು ರಕ್ಷಿಸಿ ರವಿವಾರ ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದ್ದಾರೆ. ದಂಪತಿಯ ನಾಪತ್ತೆ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.