ಯುವಕನಿಗೆ ಮುಳುವಾದ ಪಕ್ಕದ ಮನೆಯ ಮಹಿಳೆಯೊಂದಿಗಿನ ಸಂಬಂಧ : ತಲೆಗೆ ಕಲ್ಲು ಎತ್ತಿಹಾಕಿ ಕೊಲೆಗೈದ ಪತಿ
Sunday, June 18, 2023
ಬೆಳಗಾವಿ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪಕ್ಕದ ಮನೆಯ ಯುವಕನನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ.
ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿ ರಮೇಶ್ ಗುಂಜಗಿ (24) ಹತ್ಯೆಯಾದ ದುರ್ದೈವಿ ಯುವಕ.
ಈತ ಪಕ್ಕದ ಮನೆಯ ಸಾವಾಂಕ್ಕಾ ಎಂಬಾಕೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಈ ವೇಳೆ ಪರಿಯನ್ನು ಬಿಟ್ಟು ಸಾವಾಂಕ್ಕಾ ರಮೇಶ್ ಮನೆಗೆ ಬಂದಿದ್ದಳು. ಈ ವಿಚಾರ ತಿಳಿದು ಒಂದು ತಿಂಗಳ ಹಿಂದಷ್ಟೇ ಗ್ರಾಮದಲ್ಲಿ ರಾಜಿ ಪಂಚಾಯತಿಗೆ ನಡೆದಿತ್ತು. ಈ ವೇಳೆ ರಮೇಶ್ ಗುಂಜಗಿ ತಾನು ಮಾಡಿದ ತಪ್ಪಿಗೆ ಯಲ್ಲಪ್ಪನಿಗೆ 2.50 ಲಕ್ಷ ರೂ. ದಂಡ ಕೊಟ್ಟಿದ್ದ. ಅಲ್ಲದೆ ಸಾವಾಂಕ್ಕ ಪತಿಮನೆಗೆ ಬಂದಿದ್ದಳು. ಆ ಬಳಿಕ ಮತ್ತೆ ತವರು ಮನೆ ಸೇರಿದ್ದಳು.
ಮತ್ತೆ ಇವರ ಸಂಬಂಧ ಮುಂದುವರಿದಿದ್ದು, ಇದರಿಂದ ಕುಪಿತಗೊಂಡ ಪತಿ ಯಲ್ಲಪ್ಪ ಕಸೊಳ್ಳಿಗೆ ತನ್ನ ಗೆಳೆಯರೊಂದಿಗೆ ಸೇರಿ, ರಮೇಶನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಇದೀಗ ಸಾವಾಂಕ್ಕ ಪತಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಕೊಲೆಯಾದ ರಮೇಶ್ ಕುಟುಂಬಸ್ಥರು ಈ ಆರೋಪ ಮಾಡಿದ್ದಾರೆ. ಯಲ್ಲಪ್ಪ, ಸಾವಂಕ್ಕಾ ಮತ್ತು ಆರು ಮಂದಿಯಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಕೆಲಸಕ್ಕಿದ್ದ ರಮೇಶ್‌ನನ್ನು ಗೆಳೆಯನ ಮೂಲಕ ಕರೆಸಿಕೊಂಡು, ಹಲಕಿ ಬಳಿ ಜಮೀನಿನಲ್ಲಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.