ಪ್ರೇಮಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿ ಮೃತದೇಹವನ್ನು ಮೊಸಳೆಗಳಿರುವ ನದಿಗೆಸೆದ ಕಿರಾತಕರು: ತನಿಖೆಯಿಂದ ಭಯಾನಕ ಸತ್ಯ ಬಯಲು
Monday, June 19, 2023
ಭೋಪಾಲ್: ಪ್ರೇಮಿಗಳಿಬ್ಬರನ್ನು ಗುಂಡಿಟ್ಟು ಕೊಲೆಗೈದು ಮೃತದೇಹಗಳನ್ನು ಕಲ್ಲು ಕಟ್ಟಿ ಮೊಸಳೆಗಳಿರುವ ನದಿಗೆ ಎಸೆದಿರುವ ಭಯಾನಕ ಘಟನೆಯೊಂದು ಮಧ್ಯಪ್ರದೇಶದ ನಡೆದಿದೆ. ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.
ಶಿವಾನಿ ತೋಮರ್ (18) ಹಾಗೂ ರಾಧೆಶ್ಯಾಮ್ ತೋಮರ್ (21) ಮೃತಪಟ್ಟ ದುರ್ದೈವಿ ಪ್ರೇಮಿಗಳು. ಮೊರೆನಾ ಜಿಲ್ಲೆಯ ರತನ್‌ಬಾಸಾಯ್ ಗ್ರಾಮದ ಶಿವಾನಿ ತೋಮರ್ ಮತ್ತು ಪಕ್ಕದ ಬಲುಪುರ ಗ್ರಾಮದ ರಾಧೆಶ್ಯಾಮ್ ತೋಮರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶಿವಾನಿ ಕುಟುಂಬ ಇದನ್ನು ಬಲವಾಗಿ ವಿರೋಧಿಸಿದ್ದರು.
ಈ ನಡುವೆ ಪ್ರೇಮಿಗಳಿಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ಯುವಕನ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನ್ನ ಪುತ್ರ ಹಾಗೂ ಆತನ ಪ್ರಢಯಸು ಇಬ್ಬರೂ ಅನೇಕ ದಿನಗಳಿಂದ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ಕೊಲೆ ಮಾಡಿರಬಹುದೆಂದು ದೂರಿನಲ್ಲಿ ಯುವಕನ ತಂದೆ ಶಂಕೆ ವ್ಯಕ್ತಪಡಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಓಡಿಹೋಗಿ ಬೇರೆಡೆ ನೆಲೆಸಿದ್ದಾರೆಂದು ಆರಂಭದಲ್ಲಿ ಭಾವಿಸಿದ್ದರು. ಆದರೆ, ಇಬ್ಬರೂ ಯಾರೊಬ್ಬರ ಕಣ್ಣಿಗೂ ಅನೇಕ ದಿನಗಳವರೆಗೆ ಕಾಣಿಸಿಕೊಳ್ಳದೇ ಇರುವುದು ಸಾವಿನ ಅನುಮಾನವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಬಳಿಕ ಪೊಲೀಸರು ಯುವತಿಯ ತಂದೆ ಮತ್ತು ಸಂಬಂಧಿಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಆರಂಭದಲ್ಲಿ ಯಾವುದೇ ಸುಳಿವನ್ನು ಬಿಟ್ಟುಕೊಡಲಿಲ್ಲ. ಯಾವಾಗ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದರೋ ಆಗ ತಪ್ಪೊಪ್ಪಿಕೊಂಡಿದ್ದಾರೆ.
ಜೂನ್ 3ರಂದು ಶಿವಾನಿ ಮತ್ತು ರಾಧೆಶ್ಯಾಮ್‌ನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದನ್ನು ಶಿವಾನಿ ಕುಟುಂಬ ಪೊಲೀಸರ ಮುಂದೆ ಬಾಯ್ದಿಟ್ಟಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರ ಮೃತದೇಹಗಳಿಗೆ ಭಾರವಾದ ಕಲ್ಲುಗಳನ್ನು ಕಟ್ಟಿ ಚಂಬಲ್ ನದಿಗೆ ಎಸೆದಿರುವುದಾಗಿ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ರಕ್ಷಣಾ ತಂಡದ ನೆರವಿನಿಂದ ಸದ್ಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಹಾಗೆ ಚಂಬಲ್ ಘರಿಯಾಲ್ ಅಭಯಾರಣ್ಯವು ಸುಮಾರು 2000ಕ್ಕೂ ಅಧಿಕ ಮೊಸಳೆ ಮತ್ತು 500ಕ್ಕೂ ಹೆಚ್ಚು ಫ್ರೆಶ್‌ವಾಟರ್ ಮೊಸಳೆಗಳ ಆವಾಸಸ್ಥಾನವಾಗಿದೆ.