ಅಪ್ರಾಪ್ತರಿಗೆ ಮದ್ಯ ಕುಡಿಸಿ, ಸಿಗರೇಟ್ ಸೇದಿಸಿ ವೀಡಿಯೋ ಹಣಕ್ಕೆ ಬೇಡಿಕೆ - ಹಣ ಕೊಡದ ಮಾಲಕನ ಪುತ್ರನನ್ನೇ ಹತ್ಯೆಗೈದ ಕಾರು ಡ್ರೈವರ್
Tuesday, June 13, 2023
ಕೊಪ್ಪಳ: ಕಾರು ಡ್ರೈವರ್ ಓರ್ವನು ಹಣಕ್ಕಾಗಿ ತನ್ನ ಮಾಲಕನ ಪುತ್ರನನ್ನೇ ಹತ್ಯೆಗೈದಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದಿದೆ.
ಪ್ರಜ್ವಲ್(15) ಕೊಲೆಯಾದ ಬಾಲಕ. ಕುಕನೂರು ಪಟ್ಟಣ ನಿವಾಸಿ ಶಂಕರ್ ಆರೋಪಿ.
ಆರೋಪಿ ಶಂಕರ್ ಅಪ್ರಾಪ್ತ ವಯಸ್ಕ ಬಾಲಕರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ಮಾಡುತ್ತಿದ್ದ. ಬಳಿಕ ಆ ವೀಡಿಯೋವನ್ನು ಇರಿಸಿಕೊಂಡು ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ. ಇದೇ ಕೃತ್ಯವನ್ನು ತನ್ನ ಮಾಲಕನ ಪುತ್ರ ಪ್ರಜ್ವಲ್ ಮೇಲೂ ಪ್ರಯೋಗಿಸಿದ್ದಾನೆ. ಆದರೆ ಆತ ಹಣ ನೀಡಲು ಹಿಂದೇಟು ಹಾಕಿದ್ದಾನೆ. ಆದ್ದರಿಂದ ಪ್ರಜ್ವಲ್‌ನನ್ನು ಬಾವಿಯಲ್ಲಿ ಮುಳುಗಿಸಿ ಶಂಕರ್ ಕೊಲೆ ಮಾಡಿದ್ದಾನೆ. ಬಳಿಕ ಈಜಲು ಹೋದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮನೆಯವರಿಗೆ ತಿಳಿಸಿದ್ದಾನೆ.
ಕೊಲೆ ಮಾಡಿರುವುದನ್ನು ಗಮನಿಸಿದ್ದ ಪ್ರತ್ಯಕ್ಷದರ್ಶಿಗಳಿಗೆ ಶಂಕರ್ ಬೆದರಿಕೆ ಹಾಕಿದ್ದ. ಆದರೆ ಪುತ್ರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪಾಲಕರು ಪೊಲೀಸರಿಗೆ ಕೊಲೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕರ್ ನನ್ನು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಇದೊಂದು ಸಹಜ ಸಾವು ಎಂದು ಬಿಂಬಿಸಿದ್ದಾನೆ. ಆದರೆ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆಗೈದಿರುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಇದೀಗ ಶಂಕರ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.