ಬಿಟ್ ಕಾಯಿನ್ ತನಿಖೆ: ನಳಿನ್ ಬೆವರುತ್ತಿದ್ದಾರಂತೆ- ಕಾಂಗ್ರೆಸ್ ವ್ಯಂಗ್ಯ!
ಬಿಟ್ ಕಾಯಿನ್ ತನಿಖೆ: ನಳಿನ್ ಬೆವರುತ್ತಿದ್ದಾರಂತೆ- ಕಾಂಗ್ರೆಸ್ ವ್ಯಂಗ್ಯ!
ಬಿಜೆಪಿ ಸರ್ಕಾರದ ಹಗರಣಗಳಲ್ಲೊಂದಾದ ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ಮಾಡಲಿದೆ ಎಂಬ ಸುದ್ದಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬೆವರುವಂತೆ ಮಾಡಿದೆ ಎನ್ನಲಾಗಿದೆ.
ಬಿಟ್ ಕಾಯಿನ್ ಹಗರಣದ ತನಿಖೆ ಮಾಡಲಾಗುತ್ತದೆ ಎನ್ನುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬೆವರುತ್ತಿದ್ದಾರಂತೆ...ಏಕಿರಬಹುದು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯದ ಬಾಣ ಬಿಟ್ಟಿದೆ.
ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ ಅಂದಿನ ಬಿಜೆಪಿ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಸರ್ವ ಪ್ರಯತ್ನ ಮಾಡಿತ್ತು. ಈಗ ನಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣದ ಬುಡ ಬೇರುಗಳನ್ನು ಜಾಲಾಡಲಿದೆ. ಅಂದ ಹಾಗೆ, ನಳಿನ್ ಕುಮಾರ್ ಕಟೀಲ್ ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ... ಏಕಿರಬಹುದು ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಹ್ಯಾಂಡಲ್ ಪ್ರಶ್ನೆ ಮಾಡಿದೆ.
ಬಿಟ್ ಕಾಯಿನ್ ಹಗರಣದಲ್ಲಿ ನಳಿನ್ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಕೆ. ಲಕ್ಷ್ಮಣ್ ಆರೋಪ ಮಾಡಿದ್ದರು. ಎರಡು ವರ್ಷಗಳ ಹಿಂದೆ ಪ್ರಕರಣದ ತನಿಖೆ ಹಳ್ಳ ಹಿಡಿದಾಗ ಅವರು ಈ ಪ್ರಶ್ನೆ ಮಾಡಿದ್ದರು. ತನಿಖೆಯನ್ನು ಸಿಐಡಿ ತಂಡ ಅರ್ಧಕ್ಕೆ ಸ್ಥಗಿತಗೊಳಿಸಿತ್ತು.
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಮರು ತನಿಖೆಗೆ ಸಿದ್ದರಾಮಯ್ಯ ಬೆಂಗಳೂರು ಪೊಲೀಸ್ ಕಮಿಷನರ್ ಮತ್ತು ಡಿಜಿಪಿಗೆ ಪತ್ರ ಬರೆದಿದ್ದು, ಸಿಐಡಿ ಅಥವಾ ಎಸ್‌ಐಟಿ ತಂಡದಿಂದ ವಿಶೇಷ ತನಿಖೆ ನಡೆಸುವುದು ಬಹುತೇಕ ಖಚಿತ ಎನ್ನಲಾಗಿದೆ.