ಬೆಳ್ತಂಗಡಿ: ಮುಂದುವರಿಯಿತು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಎನ್ಐಎ ತಲಾಶ್ ಕಾರ್ಯ
Tuesday, June 27, 2023
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್.ಐ.ಎ ಕಾರ್ಯಾಚರಣೆ ಮತ್ತೆ ಮುಂದುವರಿದಿದೆ. ಬೆಳ್ತಂಗಡಿ, ಬೆಳ್ಳಾರೆ , ಸುಳ್ಯ ಸೇರಿದಂತೆ ಕೊಡಗಿನಲ್ಲಿ ಎನ್ಐಎ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗಾಗಿ ಮಂಗಳವಾರ ತಲಾಶ್ ಕಾರ್ಯಾಚರಣೆ ಮುಂದುವರಿಸಿದೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಎಂಬಲ್ಲಿನ ಮನೆಯೊಂದಕ್ಕೆ ಎನ್.ಐ.ಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಪಡಂಗಡಿ ನಿವಾಸಿ ನೌಷದ್ ಎಂಬಾತನನ್ನು ವಶಪಡಿಸಿಕೊಳ್ಳಲು ಎನ್.ಐ.ಎ ಅಧಿಕಾರಿಗಳು ಆತನ ಮನೆಗೆ ದಾಳಿ ನಡೆಸಿದೆ. ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನೌಷಾದ್ ನನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಹುಡುಕಾಡುತ್ತಿದೆ. ಈತ ಮನೆ ತೊರೆದು ಉಡುಪಿಯಲ್ಲಿ ಹೋಟೆಲ್ ಮತ್ತು ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಇದೀಗ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ನೌಷದ್ ಬಗ್ಗೆ ಮನೆಮಂದಿಯಲ್ಲಿ ವಿಚಾರಿಸಿ ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ತಲಾಶ್ ಗೂ ಎನ್ಐಎ ಕಾರ್ಯಾಚರಣೆ ಮುಂದುವರಿಸಿದೆ. ಮುಸ್ತಫಾ ಪೈಚಾರ್ , ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್ , ತುಫೇಲ್ , ಮಸೂದ್ ಅಗ್ನಾಡಿ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ ಬೆಳ್ಳಾರೆ , ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರವಿರುವ ವಾಂಡೆಟ್ ಪೊಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಗಳು ಅಂಟಿಸಿದ್ದಾರೆ. ಆರೋಪಿಗಳ ಮನೆಯ ಗೋಡೆಯ ಮೇಲೂ ಪೊಸ್ಟರ್ ಅಂಟಿಸಲಾಗಿದೆ.