ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳು ಶರಣಾಗದಿದ್ದಲ್ಲಿ ಆಸ್ತಿ ಮುಟ್ಟುಗೋಲು - ರಿಕ್ಷಾದಲ್ಲಿ ಧ್ವನಿವರ್ಧಕ ಅಳವಡಿಸಿ ಉದ್ಘೋಷಣೆ
Wednesday, June 28, 2023
ಸುಳ್ಯ: ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವ ಎನ್‌ಐಎ ತಂಡ, ನಾಪತ್ತೆಯಾಗಿರುವ ಆರೋಪಿಗಳಿಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸುಳ್ಯದ ಬೀದಿಗಳಲ್ಲಿ ರಿಕ್ಷಾದಲ್ಲಿ ಧ್ವನಿವರ್ಧಕ ಅಳವಡಿಸಿ ಉದ್ಘೋಷಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂನ್ 30ರೊಳಗೆ ಶರಣಾಗದಿದ್ದಲ್ಲಿ ಅವರ ಮನೆ ಹಾಗೂ ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ ಎಂದು ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಲಾಗಿದೆ. ಎನ್‌ಐಎ ಅಧಿಕಾರಿಗಳು ಹಾಗೂ ಸುಳ್ಯ ಪೊಲೀಸರು ಜಂಟಿಯಾಗಿ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೆ ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ.
ಸುಳ್ಯದ ಕಲ್ಲುಮುಟ್ಟು ನಿವಾಸಿ ಆರೋಪಿ ಉಮ್ಮರ್ ಫಾರೂಕ್ ನ ಮನೆಯಲ್ಲಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಲಾಗಿದೆ. ನಿನ್ನೆಯೂ ಬೆಳ್ಳಾರೆಯಲ್ಲಿ ಧ್ವನಿವರ್ಧಕದ ಮೂಲಕ ಎನ್‌ಐಎ, ನ್ಯಾಯಾಲಯದ ಆದೇಶವನ್ನು ಉದ್ಯೋಷಣೆ ಮಾಡಿ ಆರೋಪಿ ಮುಸ್ತಫನ ಮನೆಯಲ್ಲೂ ಆದೇಶ ಪ್ರತಿ ಅಂಟಿಸಿದ್ದಾರೆಂದು ತಿಳಿದುಬಂದಿದೆ.