ಮಿಷನ್ 2024- ಮಹಾಮೈತ್ರಿಯ ಉದಯ..? 17 ಪ್ರತಿಪಕ್ಷಗಳಿಂದ ಮೋದಿಗೆ ಸಂಕಷ್ಟ..?
ಮಿಷನ್ 2024- ಮಹಾಮೈತ್ರಿಯ ಉದಯ..? 17 ಪ್ರತಿಪಕ್ಷಗಳಿಂದ ಮೋದಿಗೆ ಸಂಕಷ್ಟ..?
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಮಹಾಮೈತ್ರಿಗೆ ವೇದಿಕೆ ಸಜ್ಜುಗೊಂಡಿದೆ. ಪಟ್ನಾದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 17 ಪಕ್ಷಗಳು ಒಟ್ಟುಗೂಡಿದ್ದು, ಮೋದಿಯ ಮಹಾಪತನಕ್ಕೆ ಪಣತೊಟ್ಟಿದೆ.
ರಾಷ್ಟ್ರೀಯಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ, ಸಿಪಿಐಎಂ ಹಾಗೂ ಪ್ರಭಾವಿ ಪಕ್ಷಗಳಾದ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಶಿವಸೇನಾ, ಆರ್‌ಜೆಡಿ, ಸಿಪಿಐ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಎಂಎಂ ಮೊದಲಾದ ಪಕ್ಷಗಳು ಒಂದೇ ವೇದಿಕೆಯನ್ನು ಹಂಚಿಕೊಂಡಿವೆ.
ಮಹಾ ಚುನಾವಣೆಯಲ್ಲಿ ಮೋದಿ ಬಳಗವನ್ನು ಮಣ್ಣುಮುಕ್ಕಿಸಲು ಜಂಟಿ ಕಾರ್ಯತಂತ್ರವನ್ನು ಹೆಣೆಯಲು ಹಾಗೂ ಯೋಜನೆಯನ್ನು ರೂಪಿಸಲು ಮುಂದಿನ ತಿಂಗಳು ಶಿಮ್ಲಾದಲ್ಲಿ ಸಭೆ ಸೇರಲು ತೀರ್ಮಾನಿಸಿವೆ.
17 ಪಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸಲು ಸಹಮತ ವ್ಯಕ್ತಪಡಿಸಿವೆ ಎಂಬುದನ್ನು ದೃಢಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಇದೊಂದು ಆರಂಭದ ಹೆಜ್ಜೆ ಹಾಗೂ ಮಹತ್ವದ ಮೈಲುಗಲ್ಲು ಎಂದು ಬಣ್ಣಿಸಿದರು.
ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಕೆಲವೊಂದು ಭಿನ್ನಮತಗಳನ್ನು ಈ ಸಭೆಯಲ್ಲಿ ಬಗೆಹರಿಸಲಾಗಿದೆ. ಆದರೆ, ದೆಹಲಿ ಆಧ್ಯಾದೇಶದ ಕುರಿತು ಕಾಂಗ್ರೆಸ್ ತನ್ನ ಅಧಿಕೃತ ನಿಲುವು ಪ್ರಕಟಿಸಬೇಕು, ರಾಜ್ಯಸಭೆಯಲ್ಲಿ ಪಕ್ಷದ 31 ಸಂಸದರು ಈ ಆಧ್ಯಾದೇಶವನ್ನು ವಿರೋಧಿಸದ ಹೊರತು ತಾನು ಕಾಂಗ್ರೆಸ್ ಇರುವ ಮೈತ್ರಿಕೂಟದಲ್ಲಿ ಭಾಗಿಯಾಗುವುದಿಲ್ಲ ಎಂಬುದನ್ನು ಆಮ್ ಆದ್ಮಿ ಪಟ್ಟುಹಿಡಿಯಿತು.
ಈ ಮಧ್ಯೆ, ಮುಂದಿನ ಸಭೆ ಶಿಮ್ಲಾದಲ್ಲಿ ನಡೆಯಲಿದೆ ಎಂಬುದನ್ನು ಪ್ರಕಟಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆ ಸಭೆಯಲ್ಲಿ ಎಲ್ಲವೂ ಬಗೆಹರಿಯಲಿದೆ. ಮಹಾ ಚುನಾವಣೆಯನ್ನು ಎದುರಿಸುವ ಬಗ್ಗೆ ಸ್ಪಷ್ಟ ಹೆಜ್ಜೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
.