ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಗೆ ಮಾದಕದ್ರವ್ಯ ನೀಡಿ ಅತ್ಯಾಚಾರ - ಆರೋಪಿಯ ಬಂಧನಕ್ಕೆ ಪೊಲೀಸ್ ತನಿಖೆ
ಕೇರಳ: ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಮೌಂಟೇನ್ ಪಾಸ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೇ 30ರಂದು ತಾಮರಸ್ಸೆರಿಯಲ್ಲಿ ಘಟನೆ ನಡೆದಿದೆ. ಪ್ರಕರಣದ ಆರೋಪಿಯನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಹೇಳಿಕೆಯಂತೆ, ವಯನಾಡ್ ಮೂಲದ ವ್ಯಕ್ತಿಯೋರ್ವನು ಆಕೆಗೆ ಮಾದಕದ್ರವ್ಯ ನೀಡಿ ಎರ್ನಾಕುಲಂ ಹಾಗೂ ವಯನಾಡಿನ ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಘಾಟ್ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ.
ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ವಿವರವಾದ ತನಿಖೆಯನ್ನು ಆರಂಭಿಸಿದ್ದಾರೆ. ಘಟನೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಕೋಝಿಕ್ಕೋಡ್‌ಗೆ ಸಂಪರ್ಕಿಸುವ ತಾಮರಸ್ಸೆರಿ ಚುರಂ (ಮೌಂಟೇನ್ ಪಾಸ್) ನಲ್ಲಿ ಅತ್ಯಾಚಾರವೆಗಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಮರಸ್ಸೆರಿ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಕಾಲೇಜು ಬಳಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದ ಯುವತಿ ಮೇ 30ರಂದು ತನ್ನ ಮನೆಗೆ ತೆರಳಿದ್ದಳು. ಆದರೆ ಆಕೆ ಮನೆಗೆ ತಲುಪದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.