ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಆಕ್ಷೇಪಾರ್ಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ : ಭೋಜಪುರಿ ಗಾಯಕ ಅರೆಸ್ಟ್
Friday, June 9, 2023
ಗುರುಗ್ರಾಮ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಭೋಜ್‌ಪುರಿ ಗಾಯಕನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ ಮೂಲದ ಅಭಿಷೇಕ್ (21) ಬಂಧಿತ ಆರೋಪಿ. ಈತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 27,000ಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾನೆ.
ಪೊಲೀಸರ ಪ್ರಕಾರ, ಆರೋಪಿಯು ಎರಡು ವರ್ಷಗಳ ಹಿಂದೆ ರಾಜೀವ್ ನಗರದಲ್ಲಿ ವಾಸಿಸುತ್ತಿದ್ದನು. ಈ ವೇಳೆ 13 ವರ್ಷದ ಬಾಲಕಿಗೆ ಆಮಿಷವೊಡ್ಡಿದ್ದ. ಬಳಿಕ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಬಾಲಕಿಯ ಆಕ್ಷೇಪಾರ್ಹ ಫೋಟೊಗಳನ್ನು ತೆಗೆದಿದ್ದಾನೆ. ಘಟನೆಯ ಬಳಿಕ ಅಪ್ರಾಪ್ತ ಬಾಲಕಿ ಆರೋಪಿಯಿಂದ ದೂರ ಉಳಿದಿದ್ದು, ಆತನ ಬಗ್ಗೆ ಯಾರೊಂದಿಗೂ ಹೇಳಿರಲಿಲ್ಲ.
ಆರೋಪಿಯು ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಆಕ್ಷೇಪಾರ್ಹ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಆ ಫೋಟೊಗಳನ್ನು ನೋಡಿದ ಬಳಿಕ, ಸಂತ್ರಸ್ತೆಯ ಕುಟುಂಬದವರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಬಾಲಕಿ ಅತ್ಯಾಚಾರದ ವಿಚಾರವನ್ನು ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.