ಅಮೇರಿಕಾದಲ್ಲಿ ಲಕ್ಷುರಿ ಲೈಫ್ ಬಾಳಬೇಕೆಂದು ಇಂಡಿಯಾದಿಂದ ಹಾರಿದ ಯುವದಂಪತಿಗೆ ಮಾರ್ಗ ಮಧ್ಯೆ ಕಾದಿತ್ತು ಭಾರೀ ಶಾಕ್
Tuesday, June 20, 2023
ನವದೆಹಲಿ: ಲಕ್ಷುರಿ ಲೈಫ್ ನಲ್ಲಿ ಬದುಕು ಸಾಗಿಸಬೇಕೆಂದು ಭಾರತ ತೊರೆದು ಅನಧಿಕೃತವಾಗಿ ಅಮೆರಿಕಾ ಪ್ರವೇಶಿಸಲು ಪ್ಲ್ಯಾನ್ ಮಾಡಿದ್ದ ಗುಜರಾತ್ ಮೂಲದ ಯುವ ದಂಪತಿ ಇದೀಗ ಭಾರೀ ಅಪಾಯದಲ್ಲಿ ಸಿಲುಕಿದ್ದಾರೆ. ಇವರು ಪಾಕಿಸ್ತಾನ ಏಜೆಂಟ್ ಕೈಯಲ್ಲಿ ಸಿಕ್ಕಿಬಿದ್ದಿದ್ದು, ದಂಪತಿಯನ್ನು ಇರಾನ್‌ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ ಎಂದು ಹೇಳಲಾಗಿದೆ.
ಗುಜರಾತ್ ನ ಅಹಮದಾಬಾದ್ ನಗರದ ನರೋದಾ ಎಂಬ ಪ್ರದೇಶದ 29 ವಯಸ್ಸಿನ ಪಂಕಜ್ ಪಟೇಲ್ ಹಾಗೂ ಪತ್ನಿ ನಿಶಾ ಪಟೇಲ್ ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ದಂಪತಿ. ಇವರು ಅಮೆರಿಕಾದಲ್ಲಿ ಸುಖವಾಗಿ ಬದುಕುಬಹುದೆಂದು ಅಕ್ರಮವಾಗಿ ಅಮೆರಿಕ ಪ್ರವೇಶಕ್ಕೆ ಯತ್ನಿಸಿದ್ದರು. ಇದಕ್ಕೆ ಹೈದರಾಬಾದ್ ಮೂಲದ ಏಜೆಂಟ್ ಅನ್ನು ಸಂಪರ್ಕಿಸಿದ್ದರು. ಆತ ಇಬ್ಬರಿಗೂ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದನು.
ಆದರೆ ಇವರು ಇರಾನ್‌ನಲ್ಲಿ ಪಾಕ್ ಏಜೆಂಟ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣ ಸಂಬಂಧ ನರೋದಾ ಕೃಷ್ಣನಗರ ಪೊಲೀಸ್ ಠಾಣೆ ಹಾಗೂ ಅಹಮದಾಬಾದ್ ನಗರದ ಅಪರಾಧ ವಿಭಾಗದಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಚೈತನ್ಯ ಮಂಡಲಿಕ್ ತಿಳಿಸಿದ್ದಾರೆ.
ಆದರೆ ಈ ಪ್ರಕರಣ ದೇಶದಿಂದ ಹೊರಗಡೆ ನಡೆದಿರುವುದರಿಂದ ಅಪರಾಧ ವಿಭಾಗ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪೂಣ ಮಾಹಿತಿಯೊಂದಿಗೆ ಸಂಪರ್ಕಿಸಲಿದೆ. ಆದಷ್ಟು ಶೀಘ್ರ ದಂಪತಿಯ ಬಿಡುಗಡೆಗೆ ಪ್ರಯತ್ನಿಸಲಾಗುತ್ತದೆ ಎಂದು ಚೈತನ್ಯ ಮಂಡಲಿಕ್ ಹೇಳಿದರು.
ಏಜೆಂಟ್ ಯೋಜನೆಯ ಪ್ರಕಾರ, ದಂಪತಿ ಇರಾನ್‌ನ ಟೆಹ್ರಾನ್‌ನಲ್ಲಿ ಬಂದು ಇಳಿಯಬೇಕಿತ್ತು. ಬಳಿಕ ಆತನ ಸೂಚನೆಗಳ ಪ್ರಕಾರ ಮುಂದುವರಿಯಬೇಕಿತ್ತು. ಆದಾಗ್ಯೂ ಕೆಲವು ದಿನಗಳ ಹಿಂದೆ ತೆಹ್ರಾನ್‌ನಲ್ಲಿ ಲ್ಯಾಂಡ್ ಆದ ಬಳಿಕ, ಓರ್ವ ಪಾಕಿಸ್ತಾನಿ ಏಜೆಂಟ್ ಬಂದು ಅವರಿಬ್ಬರನ್ನು ಹೋಟೆಲ್ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ. ಬಳಿಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನಿ ಏಜೆಂಟ್ ಮತ್ತು ಆತನ ಸಹಚರರು ಪಂಕಜ್ ಪಟೇಲ್ ಅವರನ್ನು ಥಳಿಸುತ್ತಿರುವ ವೀಡಿಯೊವನ್ನು ಅವರ ಸಂಬಂಧಿಕರಿಗೆ ಕಳುಹಿಸಿದ್ದಾರೆ. ದಂಪತಿಯನ್ನು ಬಿಡುಗಡೆ ಮಾಡಲು ಅವರು ದೊಡ್ಡ ಮೊತ್ತದ ಹಣವನ್ನೇ ಕೇಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಸಂಕಷ್ಟದಲ್ಲಿ ಸಿಲುಕಿರುವ ದಂಪತಿಯನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ವ ಪ್ರಯತ್ನ ನಡೆಯುತ್ತಿದೆ.