ರಾಜಕೀಯ ಜೀವನದಲ್ಲೇ ಮೋದಿಯಷ್ಟು ದೊಡ್ಡ ಸುಳ್ಳುಗಾರ ಪ್ರಧಾನಿಯನ್ನು ನೋಡಿಲ್ಲ: ಮಹಾರಾಷ್ಟದಲ್ಲಿ ಸಿಎಂ ಸಿದ್ದು ವಾಗ್ದಾಳಿ
ರಾಜಕೀಯ ಜೀವನದಲ್ಲೇ ಮೋದಿಯಷ್ಟು ದೊಡ್ಡ ಸುಳ್ಳುಗಾರ ಪ್ರಧಾನಿಯನ್ನು ನೋಡಿಲ್ಲ: ಮಹಾರಾಷ್ಟದಲ್ಲಿ ಸಿಎಂ ಸಿದ್ದು ವಾಗ್ದಾಳಿ
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲೇ ಪ್ರಧಾನಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ತಾವು ನೋಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಮಹೋನ್ನತ ಜಯಕ್ಕೆ ಕಾರಣರಾದ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಆಯೋಜಿಸಲಾದ ಬೃಹತ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮೋದಿ ಅವರ ವಿರುದ್ಧ ಟೀಕಾಪ್ರಹಾರ ಮಾಡಿದ ಸಿದ್ದರಾಮಯ್ಯ, 2014ರಲ್ಲಿ ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಅದೇ ರೀತಿ, ಎರಡು ಕೋಟಿ ಉದ್ಯೋಗ ಸೃಷ್ಟಿಸಿ ಅಚ್ಚೇ ದಿನ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ತಮ್ಮ ಯಾವ ಭರವಸೆಯನ್ನೂ ಈಡೇರಿಸದ ಮೋದಿ ಸುಳ್ಳುಗಳ ಕೋಟೆ ಕಟ್ಟಿ ರಾಜಕೀಯ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕಡು ಭ್ರಷ್ಟತನದಿಂದ ಕೂಡಿತ್ತು. ಈ ಕಾರಣಕ್ಕಾಗಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮೋದಿ ನೇತೃತ್ವದ ಸರ್ಕಾರವನ್ನು ತೊಲಗಿಸಿ... ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.