ಹಾವಿನ ಮರಿಯನ್ನೇ ಕಚ್ಚಿಕೊಂದ ಮೂರರ ಬಾಲಕ
Monday, June 5, 2023
ಉತ್ತರಪ್ರದೇಶ: ಮೂರು ವರ್ಷದ ಬಾಲಕನೋರ್ವನು ಹಾವಿನಮರಿಯನ್ನು ಕಚ್ಚಿ ಸಾಯಿಸಿರುವ ಘಟನೆ ಫರೂಕಾಬಾದ್ ಜಿಲ್ಲೆಯ ಮೊಹಮ್ಮದಾಬಾದ್ ಪ್ರದೇಶದ ಮದ್ಲಾಪುರ ಗ್ರಾಮದಲ್ಲಿ ನಡೆದಿದೆ.
ದಿನೇಶ್ ಕುಮಾರ್ ಎಂಬುವವರ ಪುತ್ರ ಆಯುಷ್ ಮನೆಯಂಗಳದಲ್ಲಿ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಕಿರುಚಾಡಿದ್ದಾನೆ. ಗಾಬರಿಯಲ್ಲಿ ಅಜ್ಜಿ ಬಂದು ನೋಡಿದಾಗ ಹಾವೊಂದು ಸತ್ತು ಬಿದ್ದಿತ್ತು. ಆಯುಷ್ ಬಾಯಿ - ಮುಖದಲ್ಲಿ ರಕ್ತ ಕಾಣುತ್ತಿತ್ತು. ವಿಚಾರ ತಿಳಿದು ಗಾಬರಿಗೊಂಡ ಪಾಲಕರು ತಕ್ಷಣ ಆಯುಷ್‌ನ ಬಾಯಿ ಸ್ವಚ್ಛಗೊಳಿಸಿ, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. 24 ಗಂಟೆಗಳ ಕಾಲ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಬಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕಿತ್ಸೆ ನೀಡಲು ವೈದ್ಯರಿಗೆ ಸುಲಭವಾಗಲೆಂದು ಬಾಲಕ ಕಚ್ಚಿ ಕೊಂದಿರುವ ಹಾವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಆಸ್ಪತ್ರೆಗೆ ತಂದಿದ್ದಾರೆ. ಆದರೆ ವಿಷಕಾರಿಯಲ್ಲದ ಹಾವನ್ನು ಆಯುಷ್ ಜಗಿದಿದ್ದಾನೆ. ಆದ್ದರಿಂದ ಅದೃಷ್ಟವಶಾತ್ ಪ್ರಾಣಕ್ಕೇನು ತೊಂದರೆಯಾಗಿಲ್ಲ. ಅಗತ್ಯ ಔಷಧ ನೀಡಲಾಗಿದ್ದು, ಇದೀಗ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದು ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಡಾ.ಸಲೀಂ ಅನ್ಸಾರಿ ತಿಳಿಸಿದ್ದಾರೆ.