ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ - ಆರೋಪಿ ದೋಷಮುಕ್ತ ಎಂದ ಸಿಬಿಐ ವಿಶೇಷ ನ್ಯಾಯಾಲಯ
Friday, June 16, 2023
ಬೆಳ್ತಂಗಡಿ: ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಉಜಿರೆಯ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತೀರ್ಪು 11 ವರ್ಷದ ಬಳಿಕ ಇಂದು ಪ್ರಕಟವಾಗಿದೆ. ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನು ಕೇಸ್ ನಿಂದ ಖುಲಾಸೆಗೊಳಿಸಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ .ಸಿ.ಬಿ. ಆದೇಶಿಸಿದ್ದಾರೆ.
ಸೌಜನ್ಯಾಳನ್ನು 2012ರ ಅಕ್ಟೋಬರ್ 10 ರಂದು ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಧರ್ಮಸ್ಥಳದ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಎರಡನೇ ಪುತ್ರಿಯಾದ 17 ವರ್ಷದ ಸೌಜನ್ಯಾ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಆಕೆಯನ್ನು ದಾರಿ ಮಧ್ಯೆಯೇ ತಡೆದು ಕಾಡಿಗೆ ಎಳೆದೊಯ್ದು ಅತ್ಯಾಚಾರ ನಡೆಸಿ ಕೊಲೆ ನಡೆಸಲಾಗಿತ್ತು.
ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಶಂಕಿತ ಆರೋಪಿತ ಸಂತೋಷ್ ರಾವ್ ನನ್ನು ಬಂಧಿಸಿದ್ದರು. ಆದರೆ ಈತ ಮಾನಸಿಕ ಅಸ್ವಸ್ಥನಾಗಿದ್ದು, ಈ ಹಿನ್ನೆಲೆಯಲ್ಲಿ ಕೃತ್ಯ ನಡೆಸಿದ್ದ ಎನ್ನಲಾಗಿತ್ತು. ಆ ಬಳಿಕ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಹಲವು ವರ್ಷಗಳ ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.