ನೀರು ಎಂದು ಪುತ್ರಿಗೆ ಸ್ಪಿರಿಟ್ ಕುಡಿಸಿದ ತಾಯಿ: ನರ್ಸ್ ನಿರ್ಲಕ್ಷ್ಯವೇ ಕಾರಣ ಆರೋಪ
Saturday, June 17, 2023
ಮಧುರೈ: ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ನೀರು ಎಂದು ಸ್ಪಿರಿಟ್ ಸೇವಿಸಿದ ಕೊಂಚ ಹೊತ್ತಿನಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಯನ್ನು ಮನೆಯವರು ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗಾಗಿ ದಾಖಲಿಸಿದ್ದರು. ಈ ವೇಳೆ ತಾಯಿ ನೀರು ಎಂದು ಭ್ರಮಿಸಿ ಸ್ಪಿರಿಟ್ ಅನ್ನು ಕುಡಿಸಿದ್ದಾಳೆ. ತಕ್ಷಣ ರುಚಿಯ ವ್ಯತ್ಯಾಸವನ್ನು ಅರಿತ ಬಾಲಕಿ ಸ್ಪಿರಿಟ್ ಅನ್ನು ಉಗುಳಿದ್ದಾಳೆ. ಇದಾದ ಸ್ವಲ್ಪ ಕೊಂಚ ಹೊತ್ತಿನಲ್ಲಿ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ನರ್ಸ್‌ಗಳ ನಿರ್ಲಕ್ಷ್ಯದಿಂದ ಪುತ್ರಿಗೆ ಹಾಸಿಗೆಯ ಬಳಿ ಇಟ್ಟಿದ್ದ ಸ್ಪಿರಿಟ್‌ನ್ನು ತಾನು ಕುಡಿಸಿದ್ದೇನೆ. ಹಾಗಾಗಿಯೇ ಅವಳು ಮೃತಪಟ್ಟಿದ್ದಾಳೆ ಎಂದು ತಾಯಿ ಆರೋಪಿಸಿದ್ದಾಳೆ.
ಆದರೆ, ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ವೈದ್ಯರು ಆಕೆಯ ಸಾವಿಗೆ ಸ್ಪಿರಿಟ್ ಸೇವನೆ ಕಾರಣವಲ್ಲ. ಮೆದುಳಿನ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.