ಮಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಕಚೇರಿಯಲ್ಲಿಯೇ ಸುಸೈಡ್
Friday, June 2, 2023
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಖಾಯಂ ಸಿಬ್ಬಂದಿ ಪಡೀಲ್ ನಿವಾಸಿ ಕೀರ್ತನ್(35) ಆತ್ಮಹತ್ಯೆ ಮಾಡಿಕೊಂಡವರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಹಳೆಯ ದಾಖಲೆ ಪತ್ರಗಳ ಸಂಗ್ರಹಣಾ ಕೊಠಡಿಯಲ್ಲಿ ಕೀರ್ತನ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಕಚೇರಿಗೆ ಬಂದಿರುವ ಕೀರ್ತನ್ 10 ಗಂಟೆ ಸುಮಾರಿಗೆ ಹಾಜರಿ ಹಾಕಿ ದಾಖಲೆಪತ್ರಗಳ ಸಂಗ್ರಹಣಾ ಕೊಠಡಿ ಕಡೆಗೆ ತೆರಳಿದ್ದಾರೆ. ಆ ಬಳಿಕ ಅವರು ಯಾರಿಗೂ ಸಿಗದೆ ನಾಪತ್ತೆಯಾಗಿದ್ದರು. ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ. ಈ ವೇಳೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಅವರು ದಾಖಲೆ ಪತ್ರಗಳ ಸಂಗ್ರಹಣಾ ಕೊಠಡಿಗೆ ಹೋದವರು ಮತ್ತೆ ಹಿಂದಿರುಗಿ ಬಾರದಿರುವುದು ಪತ್ತೆಯಾಗಿದೆ.
ಅವರ ಮೊಬೈಲ್ ಲೊಕೇಷನ್ ಹಳೆಯ ದಾಖಲೆ ಪತ್ರಗಳ ಸಂಗ್ರಹಣಾ ಕೊಠಡಿಯಲ್ಲಿ ತೋರಿಸುತ್ತಿತ್ತು. ಕೊಠಡಿಯ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಬಾಗಿಲು ಹಾಕಲಾಗಿತ್ತು. 1 ಗಂಟೆಯ ಸುಮಾರಿಗೆ ಕಿಟಕಿಯಲ್ಲಿ ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಮೃತದೇಹವನ್ನು ಮಹಜರಿಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಕೀರ್ತನ್ ಗೆ ಪ್ರೊಮೊಷನ್ ಆಗಿತ್ತು. ಈ ಹಿಂದೆಯೂ ಅವರು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಕೀರ್ತನ್ ವಿವಾಹಿತರಾಗಿದ್ದು ಹೆಣ್ಣು ಮಗುವನ್ನು ಹೊಂದಿದ್ದರು.