ನೂತನವಾಗಿ ಮನೆ ಗೃಹಪ್ರವೇಶವಾದ ಐದೇ ದಿನಕ್ಕೆ ನೇಣಿಗೆ ಶರಣಾಗಿ ಯುವತಿ ಸಾವು : ಬ್ಯಾಂಕ್ ಲೋನ್ ಇದ್ದ ಮನೆ ಖರೀದಿಸಿ ಮೋಸ, ಪ್ರಿಯಕರನಿಗೆ ಪತ್ರ
Thursday, June 8, 2023
ಉಳ್ಳಾಲ: ಸಾಕಷ್ಟು ಖರ್ಚು ಮಾಡಿ ಮನೆ ಖರೀದಿಸಿ ನೂತನವಾಗಿ ಅದ್ದೂರಿ ಗೃಹಪ್ರವೇಶ ಮಾಡಿದ ಐದೇ ದಿನಕ್ಕೆ ಅದೇ ಮನೆಯಲ್ಲಿ ಯುವತಿಯೋರ್ವಳು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.
ಫರಂಗಿಪೇಟೆ ಮೂಲದ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿ ಅಶ್ವಿನಿ ಬಂಗೇರ(25) ನೇಣಿಗೆ ಶರಣಾದ ಯುವತಿ.
ಜೂನ್ 7ರಂದು ರಾತ್ರಿ ಅಶ್ವಿನಿ ಬಂಗೇರ ತಮ್ಮ ಸ್ನೇಹಿತೆಯೊಂದಿಗೆ ಚಾಟ್ ಮಾಡಿದ್ದಾಳೆ. ಆದರೆ ಅದೇ ಸ್ನೇಹಿತೆ ಬೆಳಗ್ಗೆ ಬಂದು ಕೋಣೆಯ ಬಾಗಿಲು ಬಡಿದು ತೆಗೆಯದ್ದು ನೋಡಿ, ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಅಶ್ವಿನಿಯವರು ಬರೆದಿಟ್ಟ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ. ಡೆತ್ ನೋಟಲ್ಲಿ ತಾನು ಬ್ಯಾಂಕ್ ಲೋನ್ ಇದ್ದ ಮನೆ ಖರೀದಿಸಿ ಮೋಸ ಹೋಗಿದ್ದೇನೆ. ಬ್ಯಾಂಕ್ ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಿರುವುದಾಗಿ ಬರೆದಿದ್ದಾರೆ.
ಅಶ್ವಿನಿ ಮಧ್ಯಮವರ್ಗದ ಕುಟುಂಬದವರಾಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬವರಿಂದ ಅಶ್ವಿನಿಯವರೇ ಮನೆ ಖರೀದಿಸಿದ್ದರು. ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಪುತ್ರರೊಂದಿಗೆ ನೆಲೆಸಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಇವರೆಲ್ಲ ಇದ್ದರೂ, ತನ್ನ ಕೋಣೆಯಲ್ಲಿ ಅಶ್ವಿನಿ ಸಾವಿಗೆ ಶರಣಾಗಿದ್ದು ಮನೆಯವರಿಗೇ ತಿಳಿದಿರಲಿಲ್ಲ.
ಡೆತ್ ನೋಟ್ ನಲ್ಲಿ ಅಶ್ವಿನಿಯವರು ತಮ್ಮ ಪ್ರಿಯಕರನ ಹೆಸರನ್ನು ಉಲ್ಲೇಖಿಸಿ 'ಐ ಲವ್ ಯೂ' ಅಂತ ಬರೆದಿದ್ದಾರೆ. ಅಲ್ಲದೆ ತಾನು ಬಳಸುತ್ತಿದ್ದ ಐಫೋನ್ ಅನ್ನು ಆತನಿಗೆ ನೀಡಬೇಕೆಂದು ಹೇಳಿಕೊಂಡಿದ್ದಾರೆ. ಅಶ್ವಿನಿಯ ತಾಯಿ ಪುತ್ರಿಯನ್ನು ನೆನೆದು ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಬ್ಯಾಂಕ್ ಸಾಲದಿಂದ ಅಶ್ವಿನಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.