ಪತ್ನಿಯ ಬಯಕೆ ತೀರಿಸಲು ಮಾಡಬಾರದ್ದನ್ನು ಮಾಡಿ ಕಂಬಿ ಹಿಂದೆ ಹೋದ ಪತಿ
Tuesday, June 27, 2023
ಉತ್ತರಪ್ರದೇಶ: ಪತ್ನಿಯ ಆಸೆ ಪೂರೈಸಲು ಮನಸ್ಸು ಮಾಡಿ ಮಾಡಬಾರದ್ದನ್ನು ಮಾಡಿದ ಪತಿಯೋರ್ವನಿಗೆ ಇದೀಗ ಕಂಬಿ ಎಣಿಸುವ ಸ್ಥಿತಿ ಬಂದೊದಗಿದೆ. ಹೊಸದಾಗಿ ಮದುವೆಯಾದ ಈತ ತನ್ನ ಪತ್ನಿಯನ್ನು ಕುಲು - ಮನಾಲಿಗೆ ಕರೆದೊಯ್ಯಲು ಬೈಕ್ ಹಾಗೂ ನಗದು ದೋಚಿದ್ದಕ್ಕಾಗಿ ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ.
ಹಾಶಿಮ್ ಎಂಬಾತನಿಗೆ ಕೆಲತಿಂಗಳ ಹಿಂದೆಯಷ್ಟೇ ವಿವಾಹವಾಗಿದೆ. ಈತನ ಪತ್ನಿ ದುಬಾರಿ ಬೆಲೆಬಾಳುವ ಬೈಕ್ ನಲ್ಲಿ ಸುತ್ತಾಡಿಸುವಂತೆ ಬೇಡಿಕೆ ಇಟ್ಟಿದ್ದಾಳೆ. ಆದರೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಹಾಶಿಮ್‌ಗೆ ಪತ್ನಿ ಬಯಕೆ ತೀರಿಸಲು ಹಣ ಹೊಂದಿಸುವುದೇ ಸವಾಲಾಗಿತ್ತು. ಅದಕ್ಕಾಗಿ ಆತ ಆರಿಸಿಕೊಂಡ ದಾರಿ ಕಳ್ಳತನ.
ಪತ್ನಿಯನ್ನು ಹನಿಮೂನ್‌ಗೆ ಆಕೆಯ ನೆಚ್ಚಿನ ಬುಲೆಟ್ ಬೈಕ್‌ನಲ್ಲಿ ಕರೆದೊಯ್ಯಲು ನಿರ್ಧರಿಸಿದ ಹಾಶಿಮ್ ಬೈಕ್ ಕಳ್ಳತನ ಮಾಡಿದ್ದಾನೆ. ಅಲ್ಲದೆ ಮೆಡಿಕಲ್ ಶಾಪ್ ಒಂದರಿಂದ 1.90 ಲಕ್ಷ ರೂ. ನಗದು ದೋಚಿದ್ದಾನೆ. ಬಳಿಕ ಪತ್ನಿಯೊಂದಿಗೆ ಕದ್ದ ಬೈಕ್ ನಲ್ಲಿ ಕುಲು ಮನಾಲಿಗೆ ಹೋಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹನಿಮೂನ್‌ನಿಂದ ಮುಗಿಸಿ ಬಂದಿದ್ದ ಹಾಶಿಮ್, ಕದ್ದ ಹಣದಲ್ಲಿ ಈ ಹಿಂದೆ ಮಾಡಿದ್ದ ಸಾಲ ತೀರಿಸಲು ತೆರಳಿದ್ದ ವೇಳೆ ಬಂಧಿಸಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.
ಹಾಶಿಮ್ ತನ್ನ ಪತ್ನಿಯ ಆಸೆಗಳನ್ನು ಪೂರೈಸಲು ಕಳ್ಳತನಕ್ಕೆ ಇಳಿದಿದ್ದ. ಜೂನ್ 3ರಂದು ಮಜೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಲೆಟ್ ಬೈಕ್ ಹಾಗೂ ಜೂನ್ 4ರಂದು ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮೆಡಿಕಲ್‌ನಲ್ಲಿ ಹಣ ತುಂಬಿದ್ದ ಬ್ಯಾಗ್ ಅನ್ನು ದೋಚಿದ್ದಾನೆ. ಆತನಿಂದ ಸದ್ಯ 45,000 ರೂ., ಪಿಸ್ತೂಲ್ ಹಾಗೂ ಬುಲೆಟ್ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.